ಬೆಂಗಳೂರು: 'ಕೊರೊನಾ ವೈರಸ್' ವಿಶ್ವಮಟ್ಟದಲ್ಲಿ ಮನುಷ್ಯನ ಆರೋಗ್ಯದ ಮೇಲೆ ಭಾರಿ ದುಷ್ಪರಿಣಾಮಕ್ಕೆ ಕಾರಣವಾಯ್ತು. ಕೋವಿಡ್ನ ಪ್ರಥಮ ಪ್ರಕರಣವೂ ಕರ್ನಾಟಕದಲ್ಲಿ ಮಾರ್ಚ್ 8 2020ರಲ್ಲಿ ಪತ್ತೆಯಾಯ್ತು. ಈ ಪ್ರಕರಣವು ಅಮೆರಿಕದಿಂದ ಬೆಂಗಳೂರಿಗೆ ಫೆಬ್ರವರಿ 28 ರಂದು ಆಗಮಿಸಿದ 46 ವರ್ಷ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡು ಮಾರ್ಚ್ 8 ರಂದು ಕೊರೊನಾ ದೃಢಪಟ್ಟಿತ್ತು.
ಶರ ವೇಗವಾಗಿ ಹರಡುವ ಈ ಸೋಂಕು ಟೆಕ್ಕಿಯ ಪತ್ನಿ, 13 ವರ್ಷದ ಅವರ ಪುತ್ರಿಗೂ ಸೋಂಕು ಹರಡಿತ್ತು. ಈ ಮೊದಲ ಸೋಂಕಿತನ ಸಂಪರ್ಕದಲ್ಲಿ ಬರೋಬ್ಬರಿ 2,666 ಜನರು ಇದ್ದು ಅವರನ್ನು ಆರೋಗ್ಯ ಇಲಾಖೆ ಪತ್ತೆ ಮಾಡಿತ್ತು. ಇದೀಗ ಈ ರಾಜ್ಯದಲ್ಲಿ ಪತ್ತೆಯಾದ ಮೊದಲ ಪ್ರಕರಣಕ್ಕೆ ಎರಡು ವರ್ಷ ಭರ್ತಿಯಾಗಿದೆ. ಈ ಎರಡು ವರ್ಷಗಳ ಅವಧಿಯಲ್ಲಿ ಕೋವಿಡ್ನ ಮೂರು ಅಲೆಗಳು ಸಾಕಷ್ಟು ಸಾವು-ನೋವುಗಳಿಗೆ ಸಾಕ್ಷಿಯಾಯ್ತು.
ಈ ಮೊದಲ ಪ್ರಕರಣ ಬೆಂಗಳೂರಿನಲ್ಲಿ ಕಾಣಿಸಿಕೊಂಡ ತಕ್ಷಣವೇ ರಾಜ್ಯಾದ್ಯಂತ ಎಲ್ಲ ಎಲ್ಕೆಜಿ, ಯುಕೆಜಿ, ನರ್ಸರಿ ವಿಭಾಗಗಳನ್ನ ಮುಚ್ಚುವಂತೆ ಸೂಚಿಸಲಾಗಿತ್ತು. ಒಂದೂವರೆ ವರ್ಷಗಳು ಆದರೂ ಈ ತರಗತಿಗಳೇ ನಡೆಯಲಿಲ್ಲ. ಬಳಿಕ ರೋಗದ ತೀವ್ರತೆ ಕಡಿಮೆಯಾದ ನಂತರ ಇತ್ತೀಚೆಗೆ ತರಗತಿಗಳು ಶುರುವಾಗಿವೆ. ಎರಡು ವರ್ಷಗಳು ಕಳೆದರೂ ಸಹ ಕೊರೊನಾ ವೈರಸ್ ವಿರುದ್ಧ ಇಂದಿಗೂ ಘರ್ಷಣೆ ಮುಂದುವರೆದಿದೆ. ಒಂದಂಕಿಯಿಂದ ಶುರುವಾದ ಸೋಂಕಿತರ ಸಂಖ್ಯೆ ಇಂದು ಲಕ್ಷ ದಾಟಿದೆ.
ಇದೀಗ ಕೊರೊನಾ ಮೂರು ಅಲೆಯನ್ನ ಸಮರ್ಥವಾಗಿ ಎದುರಿಸಿರುವ ನಾವು ನಾಲ್ಕನೇ ಅಲೆ ಬರದಂತೆ ಮಾರ್ಗಸೂಚಿಯನ್ನ ಪಾಲನೆ ಮಾಡಬೇಕಿದೆ. ಒಬ್ಬರ ನಿರ್ಲಕ್ಷ್ಯವೂ ಲಕ್ಷಾಂತರ ಜನರ ಸಾವು ನೋವಿಗೆ ಕಾರಣವಾಗಿ ಇರಲಿದೆ. ಹೀಗಾಗಿ, ನಮ್ಮ ಆರೋಗ್ಯದ ಜೊತೆ ಜೊತೆಗೆ ನಮ್ಮವರ ಆರೋಗ್ಯ ಕಾಪಾಡಿಕೊಂಡು ಪ್ರತಿಯೊಬ್ಬರು ವಾರಿಯರ್ಸ್ ಆಗಿ, ಕೊರೊನಾವನ್ನ ಬಗ್ಗು ಬಡಿಯುವ ಕೆಲಸ ಮಾಡಬೇಕಿದೆ.
ಯಾವೆಲ್ಲ ರೂಪಾಂತರಿಗಳು ಕರ್ನಾಟಕದಲ್ಲಿ ಕಾಡಿದ್ವು: ಕೋವಿಡ್ನಲ್ಲಿ ನೂರಾರು ರೀತಿಯ ವೈರಾಣು ತಳಿ ಇದ್ದು ಅದರಲ್ಲಿ ಸದ್ಯ ಪತ್ತೆಯಾಗಿ ಲೆಕ್ಕಕ್ಕೆ ಸಿಕ್ಕಿರುವುದು ಕೆಲವು ರೂಪಾಂತರಿಗಳು ಮಾತ್ರ. ಕೋವಿಡ್ 19, ಅಲ್ಪಾ, ಬೇಟಾ, ಕಪ್ಪಾ, ಈಟಾ, ಡೆಲ್ಟಾ ಸಬ್ ಲೈನ್ ಏಜ್, ಒಮಿಕ್ರಾನ್ ಹಾಗೂ ಅದರ ತಳಿ BAI.1.529, BA1,BA2 ವೈರಾಣುಗಳು ಜೀನೋಮ್ ಸೀಕ್ವೆನ್ಸಿಂಗ್ ಮೂಲಕ ಪತ್ತೆಯಾಗಿದ್ದವು.
ಮಾರಕ ವೈರಸ್ ಹರಡಿದೆಷ್ಟು? ಪ್ರಾಣ ತೆಗೆದಿದ್ದು ಎಷ್ಟು?:
- ಈವರೆಗೆ ನಡೆಸಿದ ಕೋವಿಡ್ ಟೆಸ್ಟಿಂಗ್- 6,47,66,580
- ರಾಜ್ಯದ ಒಟ್ಟಾರೆ ಸೋಂಕಿತರ ಸಂಖ್ಯೆ- 39,42,575
- ಎರಡು ವರ್ಷದಲ್ಲಿ ಬಲಿಯಾದವರು- 39,991
- ಡಿಸ್ಜಾರ್ಜ್ ಆದವರು- 38,99,647
- ಸಕ್ರಿಯ ಪ್ರಕರಣಗಳು- 3049
- ಲಸಿಕೀಕರಣ- 10,14,04,625
ಕೊರೊನಾ ಅಲೆಯ ಹೋಲಿಕೆಯ ಚಿತ್ರಣ:
- ಕೊರೊನಾ ಮೊದಲ ಅಲೆಯ ಆರಂಭವಾಗಿದ್ದು 2020ರ ಮಾರ್ಚ್ 20ರಂದು. ಒಂದು ದಿನಕ್ಕೆ ಗರಿಷ್ಠ ಮಟ್ಟಕ್ಕೆ ಕೊರೊನಾ ಪ್ರಕರಣಗಳು ದಾಖಲಾಗಿದ್ದವು. ಅಕ್ಟೋಬರ್ 7 ರಂದು 9,047 ಪ್ರಕರಣಗಳ ಕಂಡುಬಂದಿತ್ತು. ನಂತರ ಮೂರು ದಿನಗಳ ಬಳಿಕ ಪೀಕ್ ಹಂತ ತಲುಪಿದಾಗ ಅಕ್ಟೋಬರ್ 10 ರಂದು ಆ್ಯಕ್ಟಿವ್ ಕೇಸ್ 1,20,929 ದಾಖಲಾಗಿದ್ದವು. ಮೊದಲ ಅಲೆಯಲ್ಲಿ ಒಟ್ಟು ದಾಖಲಾದ ಸೋಂಕಿತರ ಸಂಖ್ಯೆ 9,51,251.
- ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಮಾರ್ಚ್ 21, 2021 ರಂದು. ಒಂದು ದಿನದಲ್ಲಿ ಪೀಕ್ (ಗರಿಷ್ಠ) ಹಂತ ತಲುಪಿದ್ದು, ಮೇ 5 ರಂದು. ಆ ದಿನ 50,112 ರಷ್ಟು ಕೇಸ್ ದಾಖಲಾಗಿತ್ತು. ಮೇ 15 ರಂದು ಒಟ್ಟು ಆ್ಯಕ್ಟಿವ್ ಕೇಸ್ 6,05,494 ದಾಖಲಾಗಿದ್ದವು. ಎರಡನೇ ಅಲೆಯಲ್ಲಿ ಒಟ್ಟು ದಾಖಲಾದ ಸೋಂಕಿತರ ಸಂಖ್ಯೆ 20,53,661.
- ಕೊರೊನಾ ಮೂರನೇ ಅಲೆ ಆರಂಭವಾಗಿದ್ದು ಜನವರಿ 21, 2022 ರಂದು. ಒಂದು ದಿನದಲ್ಲಿ ಪೀಕ್( ಗರಿಷ್ಠ) ಹಂತ ತಲುಪಿದ್ದು, 47,754 ಕೇಸ್. ಪೀಕ್ ಹಂತ ತಲುಪಿದಾಗ ದಾಖಲಾದ ಒಟ್ಟು ಆ್ಯಕ್ಟಿವ್ ಕೇಸ್ 2,93,231 ರಷ್ಟು. ಮೂರನೇ ಅಲೆಯಲ್ಲಿ ಒಟ್ಟು ದಾಖಲಾದ ಸೋಂಕಿತರ ಸಂಖ್ಯೆ ಸದ್ಯ 3,15,374 (ಜನವರಿ 23ರ ವರೆಗಿನ ಅಂಕಿ- ಅಂಶ) ರಷ್ಟಿದೆ.
ಸದ್ಯ, ಮೂರನೇ ಅಲೆಯಲ್ಲಿ ಒಮಿಕ್ರಾನ್ ಸೋಂಕಿನ ತೀವ್ರತೆ ಕಡಿಮೆಯಾದರೂ ಮಾಸ್ಕ್ಗೆ ಇನ್ನು ಮುಕ್ತಿ ಸಿಕ್ಕಿಲ್ಲ. ನಾಲ್ಕನೇ ಅಲೆಯ ಆತಂಕವೂ ಇದ್ದು ಜನರು ಮೈ ಮರೆಯದೇ, ನಿರ್ಲಕ್ಷ್ಯ ವಹಿಸದೇ ಜಾಗರೂಕತೆಯಿಂದ ವರ್ತಿಸಬೇಕಿದೆ.