ಬೆಂಗಳೂರು : ಬಿಹಾರದಲ್ಲಿ ಕೊಲೆ ಮಾಡಿ ಬಂಧನ ಭೀತಿಯಿಂದ ಬೆಂಗಳೂರಿಗೆ ಬಂದು ಹಣ ಸಂಪಾದನೆಗಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಚಂಪಾನೇರ್ ಜಿಲ್ಲೆ ಮೂಲದ ಮೊಹಮ್ಮದ್ ಇಸ್ತಿಯಾಕ್ ಹಾಗೂ ಶಬೀರ್ ಬಂಧಿತ ಆರೋಪಿಗಳಾಗಿದ್ದಾರೆ.
ಇದೇ ತಿಂಗಳು ಆ.1ರಂದು ಚಿಕ್ಕಜಾಲ ಠಾಣಾ ವ್ಯಾಪ್ತಿಯ ಎರಡು ಮೊಬೈಲ್ ಅಂಗಡಿಗಳಿಗೆ ನುಗ್ಗಿ ಲಕ್ಷಾಂತರ ಮೌಲ್ಯದ ಮೊಬೈಲ್ ದೋಚಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಹಾರದಲ್ಲಿ ಕೊಲೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ವರ್ಷ ಜನವರಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮೊಹಮ್ಮದ್ ಪಿಸ್ತೂಲ್ನಿಂದ ವ್ಯಕ್ತಿಯೋರ್ವನನ್ನು ಶೂಟ್ ಮಾಡಿ ಕೊಲೆ ಮಾಡಿದ್ದ. ಈ ಸಂಬಂಧ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದರು. ಬಂಧನ ಭೀತಿಯಿಂದ ಮೊಹಮ್ಮದ್ ಬೆಂಗಳೂರಿಗೆ ಬಂದಿದ್ದ.
ಈತನ ಜೊತೆ ಅದೇ ಊರಿನ ಶಬ್ಬೀರ್ ಎಂಬಾತನೂ ಸಹ ಆಗಮಿಸಿದ್ದ. ಜೀವನ ನಡೆಸಲು ಎಸಿ ರಿಪೇರಿ ಕೆಲಸ ಮಾಡುತ್ತಿದ್ದ ಮೊಹಮ್ಮದ್, ಹಗಲಿನಲ್ಲಿ ಸುತ್ತಾಡಿ ಕಳ್ಳತನ ಮಾಡುವ ಅಂಗಡಿಗಳನ್ನು ಗುರುತಿಸಿಕೊಳ್ಳುತ್ತಿದ್ದ. ಮೊಬೈಲ್ ಅಂಗಡಿ ದೋಚಲು ಪಕ್ಕಾ ಪ್ಲಾನ್ ಮಾಡಿಕೊಂಡ ಮೊಹಮ್ಮದ್ಗೆ ಶಬ್ಬೀರ್ ಸಾಥ್ ನೀಡಿದ್ದಾನೆ. ಇದೇ ತಿಂಗಳು 1ರಂದು ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಎರಡು ಅಂಗಡಿಗಳಿಗೆ ನುಗ್ಗಿ ಮೊಬೈಲ್ ಕಳ್ಳತನ ಮಾಡಿದ್ದರು.
ಬಳಿಕ ಇನ್ಸ್‌ಪೆಕ್ಟರ್ ರಾಘವೇಂದ್ರ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಕೊಲೆ ಮಾಡಿರುವ ಕುರಿತಂತೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳ ವಿರುದ್ಧ ಕೊತ್ತನೂರು, ಬಾಗಲೂರು ಹಾಗೂ ಹೆಣ್ಣೂರು ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಸಿ ಕೆ ಬಾಬಾ ತಿಳಿಸಿದ್ದಾರೆ.
ಓದಿ: ಮೈಸೂರಿನಲ್ಲಿ ರೇಪ್ ಆದರೆ ನನ್ನನ್ನು ಯಾಕೆ ಕೇಳ್ತಿರಪ್ಪೋ: ಜಿ.ಎಂ. ಸಿದ್ದೇಶ್ವರ್