ಬೆಂಗಳೂರು:ಸಿನಿಮೀಯ ಶೈಲಿಯಲ್ಲಿ ಅಂಗಡಿಗಳಿಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ಹಾಡಹಗಲೇ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೆ.ಜಿ. ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ವೆಂಕಟೇಶಪುರದ ಮಜರ್ (23), ಸಯ್ಯದ್ ಮಾಜ್ (21) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರು ಮಾರಕಾಸ್ತ್ರ ಹಿಡಿದು ಅಂಗಡಿಗಳಿಗೆ ಹೋಗಿ ವ್ಯಾಪಾರಸ್ಥರನ್ನು ಬೆದರಿಸಿ ಹಣ ವಸೂಲಿಗೆ ಯತ್ನಿಸುತ್ತಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು.
ಹಣ ವಸೂಲಿ ಯತ್ನದ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೊಲೀಸರಿಗೆ ಟ್ಯಾಗ್ ಮಾಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ಇಬ್ಬರು ದರೋಡೆಕೋರರನ್ನು ಬಂಧಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ಮಾಹಿತಿ ನೀಡಿದ್ದಾರೆ.
ಬಂಧಿಸಲು ಹೋದಾಗ ಡ್ರಗ್ಸ್ ಪತ್ತೆ: ಆರೋಪಿಗಳ ವಿರುದ್ಧ ಎರಡು ಸುಲಿಗೆ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ತನಿಖೆ ಸಂದರ್ಭದಲ್ಲಿ ಆರೋಪಿ ಮಜರ್ ಬಳಿ 1.38 ಲಕ್ಷ ರೂ ಮೌಲ್ಯದ 25 ಗ್ರಾಂ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದೆ.
ಇದನ್ನೂ ಓದಿ: ಕಾವೇರಿ ನದಿ ದುರಂತ : ಸಂಗಮದ ಬಳಿ ಮತ್ತೊಬ್ಬ ಮಹಿಳೆ ಮೃತದೇಹ ಪತ್ತೆ
ಆರೋಪಿಗಳಿಂದ ಒಂದು ವಾರದ ಹಿಂದೆ ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ವ್ಯಾಪ್ತಿಯಿಂದ ಕಳವು ಮಾಡಿದ್ದ ಹೋಂಡಾ ಡಿಯೋ ಬೈಕ್ ಸೇರಿದಂತೆ ಒಟ್ಟು 1.98 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೆ.ಜಿ. ಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಿದ್ದಾರೆ. ಈವರೆಗೆ ಮಜರ್ ವಿರುದ್ಧ 8 ಪ್ರಕರಣ ಮತ್ತು ಸಯ್ಯದ್ ಮಾಜ್ ವಿರುದ್ಧ 11 ಪ್ರಕರಣಗಳಿವೆ ಎಂದು ಡಿಸಿಪಿ ತಿಳಿಸಿದ್ದಾರೆ.