ಬೆಂಗಳೂರು: ದೆಹಲಿಯ ಫ್ಲಾಟ್ನಲ್ಲಿ ದೊರೆತ ಹವಾಲ ಹಣ ಪ್ರಕರಣದಲ್ಲಿ ತಾವು ಜೈಲಿಗೆ ಹೋಗಬಾರದೆಂದು ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್, ಪ್ರಭಾವಿ ರಾಜಕಾರಣಿ ಡಿ.ಕೆ ಶಿವಕುಮಾರ್ ನಡೆಸಿದ ಹೋರಾಟಗಳು ಫಲ ನೀಡದೇ ಕೊನೆಗೂ ಜೈಲು ಸೇರುವಂತಾಗಿದೆ.
ಅಕ್ರಮ ಸಂಪತ್ತಿನ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ವಿರುದ್ದ ಡಿಕೆ ಶಿವಕುಮಾರ್ ಜನಪ್ರತಿನಿಧಿ ಕೋರ್ಟ್ನಿಂದ ಹಿಡಿದು ಸುಪ್ರೀಂಕೋರ್ಟ್ ತನಕ ಕಾನೂನು ಹೋರಾಟ ನಡೆಸಿದರು. ಆದರೆ, ಜನಪ್ರತಿನಿಧಿ ಕೋರ್ಟ್ನಲ್ಲಿ ಇಡಿ ಸಮನ್ಸ್ ರದ್ದು ಪಡಿಸಲು ನಿರಾಕರಿಸಿ ತೀರ್ಪು ನೀಡಿದ ನಂತರ ಡಿಕೆಶಿ ಕೂಡಲೇ ಹೈಕೋರ್ಟ್ ಮೊರೆ ಹೋದರು.
2017 ರ ಆಗಸ್ಟ್ 1 ರಂದು ದೆಹಲಿಯ ಫ್ಲಾಟ್ನಲ್ಲಿ 8.59 ಕೋಟಿ ರೂಪಾಯಿ ಅಕ್ರಮ ಹಣ ದೊರೆತ ಪ್ರಕರಣದಲ್ಲಿ ತಮ್ಮ ವಿರುದ್ಧ ಅನಗತ್ಯವಾಗಿ ಮೊಕದ್ದಮೆ ದಾಖಲಿಸಲಾಗಿದೆ. ತಮ್ಮ ವಿರುದ್ದ ಸೆಕ್ಷನ್ 120 ಸೇರಿದಂತೆ ಒಳಸಂಚು, ಅಕ್ರಮ ಹಣ ವರ್ಗಾವಣೆ , ವಂಚನೆ ಬಗ್ಗೆ ಹೂಡಲಾಗಿರುವ ಪ್ರಕರಣ ರದ್ದು ಪಡಿಸಬೇಕೆಂದು ಕೋರಿದ್ದರು
ಹೈಕೋರ್ಟ್ ನಲ್ಲಿ ನ್ಯಾಯಮೂರ್ತಿ ಸುದೀರ್ಘ ವಿಚಾರಣೆ ಬಳಿಕ ಇಡಿ ಸಮನ್ಸ್ ರದ್ದುಪಡಿಸಲು ನಿರಾಕರಿಸಿ ಶಿವಕುಮಾರ್ ಅವರ ಅರ್ಜಿಯನ್ನು ವಜಾ ಮಾಡಲಾಯಿತು. ಇದರಿಂದ ಡಿಕೆ ಶಿವಕುಮಾರ್ ಆತಂಕಕ್ಕೆ ಒಳಗಾದರು. ಹೈಕೋರ್ಟ್ ತೀರ್ಪಿನ ವಿರುದ್ದ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬೇಕೆಂದು ಸಿದ್ಧತೆ ಮಾಡಿಕೊಳ್ಳುವಷ್ಟರಲ್ಲಿ ಇಡಿ ಮತ್ತೊಂದು ಸಮನ್ಸ್ ಜಾರಿ ಮಾಡಿ ಡಿಕೆ ಶಿವಕುಮಾರ್ ಅವರ ವಿಚಾರಣೆಯನ್ನು ಶುಕ್ರವಾರ ಸಂಜೆಯಿಂದಲೇ ಆರಂಭಿಸಿತು.
ಶುಕ್ರವಾರ, ಶನಿವಾರ, ಸೋಮವಾರ ಹಾಗು ಮಂಗಳವಾರ ನಾಲ್ಕು ದಿನಗಳ ಸುದೀರ್ಘ ವಿಚಾರಣೆ ನಂತರ ಡಿಕೆ ಶಿವಕುಮಾರ್ ತಮ್ಮ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿಲ್ಲವೆಂದು ಆರೋಪಿಸಿ ಮಂಗಳವಾರ ರಾತ್ರಿ 8.20 ರ ಸುಮಾರು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದರು.
ನಾಲ್ಕು ದಿನಗಳ ಕಾಲ ವಿಚಾರಣೆ ನಡೆಸಿದ್ದರಿಂದ ಇಡಿ ಬಂಧನ ಮಾಡುವುದಿಲ್ಲವೆಂದು ಖುದ್ದಾಗಿ ಡಿಕೆಶಿ ಸೇರಿದಂತೆ ಅವರ ಆಪ್ತರು ಭಾವಿಸಿದ್ದರು. ಏಕಾಏಕಿ ಇಡಿ ಬಂಧನದಿಂದ ಡಿಕೆಶಿ ಕುಟುಂಬಕ್ಕೆ ಶಾಕ್ ಆಗಿದ್ದು, ಬಂಧನದ ವಿರುದ್ದ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ಜಾಮೀನು ಪಡೆಯಲು ಕಾನೂನು ಹೋರಾಟ ನಡೆಸಲು ವಕೀಲರ ತಂಡ ಸಿದ್ದತೆ ನಡೆಸಿದೆ.