ಬೆಂಗಳೂರು: ರಾಜಧಾನಿಯಲ್ಲಿ ತಮ್ಮದೇ ದರ್ಬಾರ್ ನಡೆಸುತ್ತಿದ್ದ ಅಗ್ರಿಗೇಟರ್ಸ್ ಕಂಪನಿಗಳಾದ ಓಲಾ, ಉಬರ್, ರಾಪಿಡೋ ಮುಂತಾದ ಸಂಸ್ಥೆಗಳ ಆಟೋಗಳಿಗೆ ನೂತನ ದರ ನಿಗದಿ ಮಾಡಿರುವ ಸಾರಿಗೆ ಇಲಾಖೆ ಆದೇಶವನ್ನು ಆಟೋ ಚಾಲಕರ ಸಂಘಟನೆಗಳು ಸ್ವಾಗತಿಸಿವೆ.
ಹೈಕೋರ್ಟ್ ಸೂಚನೆಯಂತೆ ಸಾರಿಗೆ ಇಲಾಖೆ ದರವನ್ನ ನಿಗದಿ ಮಾಡಿದೆ. ಕನಿಷ್ಠ ದರದ ಜತೆಗೆ ಶೇ.5 ರಷ್ಟು ದರವನ್ನು ನಿಗದಿ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿರುವುದು ಸಂತಸ ತಂದಿದೆ ಎಂದು ಆದರ್ಶ ಆಟೋ ಯೂನಿಯನ್ ಸಂಘದ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ. ಮಿನಿಮಮ್ ಚಾರ್ಜ್ 30, 40, 60 ಇದ್ದರೂ ಇದರ ಜತೆಗೆ ಶೇ.5ರಷ್ಟು ದರವನ್ನು ಮಾತ್ರ ಸಾರಿಗೆ ಇಲಾಖೆ ಹೆಚ್ಚಿಸಿದೆ. 30+ 5 % ಹೆಚ್ಚಿನ ದರದ ಜೊತೆಗೆ 5% ಜಿಎಸ್ಟಿ ಸೇರಿಸಲು ಆದೇಶ ನೀಡಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಓಲಾ, ಉಬರ್ ಆಟೋಗಳು ಪ್ರಯಾಣಿಕರ ಬಳಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿತ್ತು. ಈ ವಿವಾದದ ಹಿನ್ನೆಲೆ ಸಾರಿಗೆ ಇಲಾಖೆ ಕನಿಷ್ಠ ದರ ಜತೆಗೆ ಶೇ.5ರಷ್ಟು ದರ ನಿಗದಿ ಮಾಡಿದೆ. ಕನಿಷ್ಠ ದರ 30, 40, 60 ರೂ. ಇದ್ದರೆ ಇದೀಗ ಜತೆಗೆ ಶೇ.5ರಷ್ಟು ಹೆಚ್ಚಳ ಮಾಡಿದೆ. ಶೇ. 5 ರಷ್ಟು ಹೆಚ್ಚುವರಿ ದರದ ಜತೆ ಶೇ.5 ರಷ್ಟು ಜಿಎಸ್ಟಿ ಸೇರಿಸಲು ಸರ್ಕಾರ ಆದೇಶವನ್ನು ನೀಡಿದೆ. ಈ ಬಗ್ಗೆ ರಾಜ್ಯ ಸಾರಿಗೆ ಇಲಾಖೆ ಸೋಮವಾರ ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ.
ಹಗ್ಗಜಗ್ಗಾಟ ಅಂತ್ಯ: ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಆರೋಪ ಎದುರಿಸುತ್ತಿರುವ ಓಲಾ ಹಾಗೂ ಉಬರ್ ಪ್ರಯಾಣ ದರವನ್ನು ನಿಗದಿ ಮಾಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ 15 ದಿನಗಳ ಕಾಲಾವಕಾಶ ನೀಡಿತ್ತು. ಆದರೆ ಕಾಟಾಚಾರಕ್ಕೆ ಸಭೆ ಮಾಡಿ ಸುಮ್ಮನಾಗಿದ್ದ ಸಾರಿಗೆ ಇಲಾಖೆ ಇದೀಗ ದರ ನಿಗದಿ ಮಾಡಿದೆ. ಓಲಾ, ಉಬರ್, ಮತ್ತು ರಾಪಿಡೋ ಸಭೆ ನಡೆಸಿ ದರ ನಿಗದಿ ಬಗ್ಗೆ ಚರ್ಚಿಸಿ ಸಾರಿಗೆ ಇಲಾಖೆ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದರಿಂದ ಆ್ಯಪ್ ಆಧಾರಿತ ಓಲಾ ಉಬರ್, ರಾಪಿಡೋ ಹಾಗೂ ಸರ್ಕಾರದ ನಡುವೆ ದರ ನಿಗದಿಯ ಹಗ್ಗಜಗ್ಗಾಟ ಒಂದು ರೀತಿಯಲ್ಲಿ ಅಂತ್ಯವಾಗಿದೆ ಎಂದು ಹೇಳಬಹುದಾಗಿದೆ.
ಸಭೆಯಲ್ಲಿ ಕನಿಷ್ಠ 2 ಕಿ.ಮೀ.ಗೆ 100 ರೂ ನಿಗದಿ ಮಾಡುವಂತೆ ಕಂಪನಿಗಳು ಬೇಡಿಕೆ ಇಟ್ಟಿದ್ದವು. ಆದರೆ ಸಾರಿಗೆ ಇಲಾಖೆ ಕನಿಷ್ಠ ದರ 30, 40, 60 ರೂ ಇದ್ದರೆ ಇದೀಗ ಜತೆಗೆ ಶೇ 5 ರಷ್ಟು ಹೆಚ್ಚಳದ ಜತೆಗೆ ಶೇ 5 ರಷ್ಟು ಜಿಎಸ್ಟಿ ಸೇರಿಸಿದೆ. ಓಲಾ, ಉಬರ್ ದರ ನಿಗದಿಯ ಸಂಬಂಧ ರಾಜ್ಯ ಸರ್ಕಾರದ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ನಾವು ಮೆಮೊ ಸಿದ್ಧಪಡಿಸಿ ಅದನ್ನು ಅಡ್ವೊಕೇಟ್ ಜನರಲ್‌ಗೆ ಕೊಟ್ಟಿದ್ದೇವೆ. ಸೋಮವಾರ ಕೋರ್ಟ್‌ಗೆ ಸಲ್ಲಿಕೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಓಲಾ ಉಬರ್ ಆಟೋಗಳಿಗೆ ದರ ನಿಗದಿ ಮಾಡಿ ಸಾರಿಗೆ ಇಲಾಖೆ ಆದೇಶ