ಬೆಂಗಳೂರು: ಕಳೆದ ವಾರ ಒಂದು ಸಾವಿರ ಮಂದಿ ಹೆಡ್ ಕಾನ್ಸ್ಟೇಬಲ್ಗಳನ್ನ ವರ್ಗಾವಣೆ ಮಾಡಿದ್ದ ಬೆನ್ನಲ್ಲೆ ಇಂದು 561 ಕಾನ್ಸ್ಟೇಬಲ್ಗಳನ್ನು ವರ್ಗಾವಣೆ ಮಾಡಿ ಬೆಂಗಳೂರು ನಗರ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಅವರು ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಠಾಣೆಗಳಿಗೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಒಂದೇ ಠಾಣೆಯಲ್ಲಿ ಐದು ವರ್ಷಗಳಿಗೂ ಹೆಚ್ಚು ಕಾಲ ಕರ್ತವ್ಯದಲ್ಲಿದ್ದ ಕಾನ್ಸ್ಟೇಬಲ್ ವರ್ಗಾವಣೆ ಮಾಡಲಾಗಿದೆ. ಒಂದೆಡೆ ನಗರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗಿದ್ದರೆ, ಮತ್ತೊಂದು ಕಡೆ ಜನ ಸಾಮಾನ್ಯರಿಗೆ ನ್ಯಾಯ ಒದಗಿಸುವ ಪೊಲೀಸರೇ ಅಕ್ರಮ ಚಟುವಟಿಕೆಗಳಿಗೆ ಸಾಥ್ ನೀಡಿ ಲಂಚ ಪಡೆಯುತ್ತಿರುವುದು ಅಲ್ಲಲ್ಲಿ ಬೆಳಕಿಗೆ ಬರುತ್ತಿತ್ತು.
ಈ ನಡುವೆ ಕೆಲ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿ ಲಾಬಿ ನಡೆಸಿ 8ಕ್ಕೂ ಅಧಿಕ ವರ್ಷಗಳಿಂದ ಯಾವುದೇ ವರ್ಗಾವಣೆ ಇಲ್ಲದೆ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಅಲ್ಲದೇ, ನಗರದ ಸಾಕಷ್ಟು ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಅಪರಾಧ ಹಿನ್ನೆಲೆ ಇರುವ ವ್ಯಕ್ತಿಗಳ ಬಗ್ಗೆ ಗೊತ್ತಿದ್ದರೂ ವಿವಿಧ ಆಮಿಷಗಳಿಗೆ ಒಳಗಾಗಿ ಕ್ರಮ ಕೈಗೊಳ್ಳುತ್ತಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.
ಸದ್ಯ ಹೆಡ್ ಕಾನ್ಸ್ಟೇಬಲ್, ಕಾನ್ಸ್ಟೇಬಲ್ಗಳು ಮಾತ್ರವಲ್ಲದೇ ಸಬ್ ಇನ್ಸ್ಪೆಕ್ಟರ್ಗಳೂ ಕೆಲ ವರ್ಷಗಳಿಂದ ಗ್ರಾಮೀಣ ಭಾಗಕ್ಕೆ ಹೋಗದೆ ನಗರದಲ್ಲೇ ಠಿಕಾಣಿ ಹೂಡಿರುವ ಬಗ್ಗೆ ಮಾಹಿತಿ ಈಗಾಗಲೇ ಕಲೆಹಾಕಲಾಗಿದೆ. ಹಂತ - ಹಂತವಾಗಿ ವರ್ಗಾವಣೆ ಮಾಡುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆಸಲು ಚಿಂತಿಸಲಾಗಿದೆ ಎನ್ನುವ ಮಾಹಿತಿ ಇದೆ.