ಬೆಂಗಳೂರು : ವಾಹನ ಓಡಿಸುವಾಗ ಟ್ರಾಫಿಕ್ ಪೊಲೀಸರು ಇಲ್ಲ ಅಂದುಕೊಂಡು ಸಂಚಾರಿ ನಿಯಮ ಉಲ್ಲಂಘಿಸುತ್ತೀರಾ?. ಸಿಗ್ನಲ್ನಲ್ಲಿ ಸಿಸಿಟಿವಿ ಇದ್ದರೂ ಕ್ಯಾರೇ ಮಾಡದೆ ವಾಹನ ಚಲಾಯಿಸುತ್ತೀರಾ?. ಇದೆಲ್ಲಾ ಇನ್ನು ಮುಂದೆ ನಡೆಯಲ್ಲ.
ಹಾಗೇನಾದ್ರೂ ರೂಲ್ಸ್ ಬ್ರೇಕ್ ಮಾಡಿದ್ರೆ, ನೀವು ಮನೆ ಅಥವಾ ಕಚೇರಿಗೆ ಹೋಗುವ ಕೆಲವೇ ಗಂಟೆಗಳ ಅಂತರದಲ್ಲಿ ನಿಮ್ಮ ಮೊಬೈಲ್ಗೆ ಟ್ರಾಫಿಕ್ ಪೊಲೀಸರು ಎಸ್ಎಂಎಸ್ ಕಳುಹಿಸಿ ದಂಡ ವಸೂಲಿ ಮಾಡುವ ವ್ಯವಸ್ಥೆ ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ.
ಡಿಜಿಟಲ್ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುತ್ತಿರುವ ನಗರ ಸಂಚಾರ ಪೊಲೀಸ್ ಇಲಾಖೆಯು ಹೆಚ್ಚಾಗುತ್ತಿರುವ ಸಂಚಾರಿ ನಿಯಮ ಉಲ್ಲಂಘನೆಗೆ ಬ್ರೇಕ್ ಹಾಕಿ ವಾಹನ ಸವಾರರಲ್ಲಿ ದಂಡ ವಸೂಲಿ ಮಾಡಲು ಅಣಿಯಾಗುತ್ತಿದೆ.
ದಂಡದ ಮೊತ್ತ ಹೆಚ್ಚಿಸಿದರೂ ತಲೆಕೆಡಿಸಿಕೊಳ್ಳದ ವಾಹನ ಸವಾರರು ಕಟ್ಟುನಿಟ್ಟಾಗಿ ಸಂಚಾರಿ ನಿಯಮ ಪಾಲಿಸುತ್ತಿಲ್ಲ. ಹೆಲ್ಮೆಟ್ ರಹಿತ ವಾಹನ ಚಾಲನೆ, ಸಿಗ್ನಲ್ ಜಂಪ್, ಏಕಮುಖ ಸಂಚಾರ ಹಾಗೂ ಸೂಕ್ತ ದಾಖಲಾತಿಯಿಲ್ಲದೆ ವಾಹನ ಚಾಲನೆ ಸೇರಿದಂತೆ ವಿವಿಧ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜಧಾನಿಯಲ್ಲಿ ದಿನಕ್ಕೆ 45 ಸಾವಿರ ಸಂಚಾರಿ ನಿಯಮ ಉಲ್ಲಂಘನೆಗಳಾಗುತ್ತಿವೆ. ಅಲ್ಲದೆ ಉಲ್ಲಂಘಿಸಿದ ಸಂಚಾರಿ ನಿಯಮಗಳಿಗೆ ದಂಡ ಪಾವತಿಸದೆ ಅಸಡ್ಡೆ ತೋರಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ವಾಹನ ಸವಾರರಿಂದ 400 ಕೋಟಿ ರೂ.ದಂಡ ವಸೂಲಿಯಾಗಬೇಕಿದೆ.
ಪ್ರಾದೇಶಿಕ ಸಾರಿಗೆ ಇಲಾಖೆಯೊಂದಿಗೆ ಮಾತುಕತೆ : ಸವಾರರ ಉಲ್ಲಂಘನೆ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಮಾಲೀಕರಿಗೆ ತಿಳಿಸುವ ಸಲುವಾಗಿ ಪ್ರಾದೇಶಿಕ ಸಾರಿಗೆ ಇಲಾಖೆಯೊಂದಿಗೆ (ಆರ್‌ಟಿಒ) ಮಾತುಕತೆ ನಡೆಸಲಾಗಿದೆ. ಪ್ರತಿ ವಾಹನ ದಾಖಲಾತಿ ಹಾಗೂ ಮೊಬೈಲ್ ನಂಬರ್ಗಳು ಆರ್‌ಟಿಒ ಬಳಿ ಇರಲಿದೆ.
ನಗರದಲ್ಲಿ ಅಳವಡಿರುವ ಉತ್ಕೃಷ್ಟ ಮಟ್ಟದ ಕ್ಯಾಮೆರಾ ಸೇರಿದಂತೆ ಇನ್ನಿತರೆ ಎನ್ ಫೋರ್ಸ್ ಕ್ಯಾಮೆರಾ ಹಾಗೂ ಪಬ್ಲಿಕ್ ಆ್ಯಪ್ಗಳಿಂದ ದಾಖಲಾಗುವ ಉಲ್ಲಂಘನೆ ಪ್ರಕರಣ ನಗರ ಸಂಚಾರ ನಿರ್ವಹಣಾ ವಿಭಾಗ (ಟಿಟಿಎಂಸಿ)ದಲ್ಲಿ ದಾಖಲಾಗಲಿವೆ. ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ನೆರವಿನಿಂದ ಉಲ್ಲಂಘನೆಯಾಗಿರುವ ವಾಹನ ಸವಾರರಿಗೆ ಸಂದೇಶ ಕಳುಹಿಸಲಿದೆ.
ಮೆಸೇಜ್ನಲ್ಲಿ ಏನೆಲ್ಲಾ ಇರಲಿದೆ?: ನಿಯಮ ಉಲ್ಲಂಘನೆಯಾದ ಸ್ಥಳ, ಸಮಯ ಹಾಗೂ ಪಾವತಿಸಬೇಕಾದ ದಂಡ ಸಮೇತ ಮೆಸೇಜ್ ಕಳುಹಿಸಲಾಗುತ್ತದೆ. ದಂಡ ಪಾವತಿಸಲು ಸವಾರರಿಗೆ ಅನುಕೂಲವಾಗಲು ಪೇಟಿಎಂ ಮೂಲಕ ಹಣ ಸಂದಾಯ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ಹೆಚ್ಚಳ : ವಾಹನಗಳ ಸಂಖ್ಯೆ ಹೆಚ್ಚಾದಂತೆ ಉಲ್ಲಂಘನೆ ಪ್ರಮಾಣ ದಿನೇದಿನೆ ಅಧಿಕಗೊಂಡಿವೆ. ಕಳೆದ ವರ್ಷ ಬೆಂಗಳೂರಿನಲ್ಲಿ 83,83,737 ಪ್ರಕರಣ ದಾಖಲಾಗಿದ್ದರೆ, ಈ ವರ್ಷ ಜೂನ್ 31ಕ್ಕೆ ಕೊನೆಗೊಂಡಂತೆ 44,9,8278 ಪ್ರಕರಣ ದಾಖಲಾಗಿವೆ. ಕಳೆದ ವರ್ಷ 3226 ಅಪಘಾತಗೊಂಡು 647 ಜನರು ಮೃತಪಟ್ಟಿದ್ದಾರೆ. ಕಳೆದ ಆರು ತಿಂಗಳಲ್ಲಿ 1517 ಅಪಘಾತ ಪ್ರಕರಣ ದಾಖಲಾಗಿ 310 ಜನರು ಬಲಿಯಾಗಿದ್ದಾರೆ.
ಓದಿ: ರಾಜ್ಯ ಪೊಲೀಸ್ ಇಲಾಖೆ ದಕ್ಷತೆ, ವಿಶ್ವಾಸಾರ್ಹತೆಗೆ ದೇಶದಲ್ಲೇ ಹೆಸರುವಾಸಿ : ಸಿಎಂ ಶ್ಲಾಘನೆ