ಬೆಂಗಳೂರು: ಹಾಲಿ-ಮಾಜಿ ಸಿಎಂಗಳು ಒಂದೇ ಆಸ್ಪತ್ರೆಗೆ ದಾಖಲಾಗಿದ್ದು, ಇಬ್ಬರಿಗೂ ಕೊರೊನಾ ಸೋಂಕು ಇರುವುದು ದೃಢವಾಗಿದೆ.
ಮೊನ್ನೆಯಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಅವರಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಸಿದ್ದರಾಮಯ್ಯ ಅವರಿಗೆ ಆರಂಭದಲ್ಲಿ ಜ್ವರ, ಮೈ-ಕೈ ನೋವು ಕಾಣಿಸಿಕೊಂಡಿದ್ದು, ಸದ್ಯ ಎಮರ್ಜೆನ್ಸಿ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಅವರಿಗೆ ಎರಡು ಬಾರಿ 'ಹೃದಯ ಶಸ್ತ್ರಚಿಕಿತ್ಸೆ' ಆಗಿದ್ದು, ಸ್ಟಂಟ್ ಅಳವಡಿಸಲಾಗಿದೆ. ಜೊತೆಗೆ ಮೂತ್ರದ ಉರಿಯೂತ ಸಮಸ್ಯೆ ಇದೆ. ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಚಿಕಿತ್ಸೆ ನೀಡಲು ಉನ್ನತ ಮಟ್ಟದ ವೈದ್ಯರ ತಂಡವನ್ನ ಸಿದ್ಧಗೊಳಿಸಿದ್ದು, ಅವರ ಮುಖಾಂತರ ಸೂಕ್ಷ್ಮ ನಿಗಾದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇದೇ ತಂಡ ಸಿದ್ದರಾಮಯ್ಯ ಅವರಿಗೂ ಚಿಕಿತ್ಸೆ ನೀಡಲಿದೆ.
ಇಬ್ಬರ ಆರೋಗ್ಯ ಸ್ಥಿರ, ಮುಂದುವರೆದ ಚಿಕಿತ್ಸೆ: ಮುಂಜಾನೆಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ಮಣಿಪಾಲ್ ಆಸ್ಪತ್ರೆಯ ವೈದ್ಯರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಕೊರೊನಾ ಇರುವುದು ದೃಢವಾಗಿದೆ. ಅಲೋಪತಿ ಚಿಕಿತ್ಸೆ ನೀಡುತ್ತಿದ್ದು, ಯಾವುದೇ ಆಯುರ್ವೇದ ಇತರೆ ಚಿಕಿತ್ಸೆ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇತ್ತ ಸಿಎಂ ಯಡಿಯೂರಪ್ಪ ಅವರ ಆರೋಗ್ಯವೂ ಉತ್ತಮವಾಗಿದ್ದು, ಆರಂಭದಲ್ಲಿ ಕೆಮ್ಮು ಇತ್ತು. ಇದೀಗ ಕಡಿಮೆ ಆಗಿರುವುದಾಗಿ ತಿಳಿಸಿದ್ದಾರೆ.