ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ತಿಹಾರ್ ಜೈಲು ಸೇರಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ದೆಹಲಿ ಹೈಕೋರ್ಟ್ನಿಂದ ಷರತ್ತುಬದ್ಧ ಜಾಮೀನು ಪಡೆದು 57 ದಿನಗಳ ಬಳಿಕ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಕೆಂಪೇಗೌಡ ಏರ್ಪೋರ್ಟ್ ಬಳಿ ಡಿ.ಕೆ.ಶಿವಕುಮಾರ್ಗೆ ಅದ್ಧೂರಿಯಾಗಿ ಸ್ವಾಗತ ಕೋರಲು ಕಾಂಗ್ರೆಸ್ ಮುಂದಾಗಿದೆ. ಸುಮಾರು 6ರಿಂದ 7 ಸಾವಿರ ಕಾರ್ಯಕರ್ತರು ಹಾಗೂ ಬೆಂಬಲಿಗರು ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ ಬೆಂಬಲಿಗರಿಂದ ಗೊಂದಲ, ಗಲಾಟೆಯ ವಾತವರಣ ಸೃಷ್ಟಿಯಾಗಬಹುದೆನ್ನುವ ಕಾರಣಕ್ಕೆ ಡಿಸಿಪಿ, ಡಿಸಿ, ಎಸಿಪಿ ನೇತೃತ್ವದಲ್ಲಿ ಸಾದಹಳ್ಳಿ ಗೇಟ್ ಬಳಿ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆಯಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ದೆಹಲಿಯಿಂದ ಇಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ರಾಜ್ಯಕ್ಕೆ ಆಗಮಿಸಲಿದ್ದು, ಇಂದು ಬೆಳಗ್ಗೆ 10.30ಕ್ಕೆ ದೆಹಲಿಯ ಡಿ.ಕೆ. ಸುರೇಶ್ ನಿವಾಸದಿಂದ ಹೊರಟು, ಮಧ್ಯಾಹ್ನ 11.55 ಕ್ಕೆ ಸ್ಪೈಸ್ ಜೆಟ್ ವಿಮಾನದಲ್ಲಿ ಹೊರಟು 2.30ರ ವೇಳೆಗೆ ಬೆಂಗಳೂರು ತಲುಪಲಿದ್ದಾರೆ.
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇವರಿಗೆ ಅದ್ಧೂರಿ ಸ್ವಾಗತ ಕೋರಲು ಕಾರ್ಯಕರ್ತರು, ಅಭಿಮಾನಿಗಳು ನಿರ್ಧರಿಸಿದ್ದಾರೆ. ರಾಮನಗರ, ಕನಕಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರುನಗರದ ಅಪಾರ ಸಂಖ್ಯೆಯ ಡಿಕೆಶಿ ಬೆಂಬಲಿಗರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಹೊರಟಿದ್ದಾರೆ.
ಯುವ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಸ್ವಾಗತಿಸಲು ಬಿಐಎಲ್ನಿಂದ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಬೈಕ್ ಜಾಥಾ ಮೂಲಕ ನಡೆಸಲು ಸಜ್ಜಾಗಿದ್ದಾರೆ. ಸಂಜೆ 5.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಸಂದರ್ಭ ತಮ್ಮ ವಿರುದ್ಧ ಷಡ್ಯಂತ್ರ ಹೆಣೆಯಲಾಗಿದೆ ಎಂದು ಕೆಲ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸುವ ನಿರೀಕ್ಷೆ ಇದೆ.
ಡಿ.ಕೆ. ಶಿವಕುಮಾರ್ ಕುಟುಂಬ ಸದಾಶಿವನಗರ ನಿವಾಸದಲ್ಲಿ ಡಿಕೆಶಿ ಆಗಮನದ ಸಲುವಗಿ ಇಂದು ವಿಶೇಷ ಪೂಜೆ ಸಲ್ಲಿಸಲಾಗಿದೆ. ಶಿವಕುಮಾರ್ ಪತ್ನಿ ಹಾಗೂ ಮಕ್ಕಳು ಇಂದು ಬೆಳಗ್ಗೆ ಪೂಜೆ ನೆರವೇರಿಸಿದ್ದಾರೆ. ನಿನ್ನೆ ಕೂಡ ಹಸನಾಂಬೆ ದೇವಾಲಯಕ್ಕೆ ತೆರಳಿದ್ದ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿದ್ದರು. ಡಿ.ಕೆ. ಶಿವಕುಮಾರ್ ಮರಳಿ ಬರುತ್ತಿರುವುದು ಕುಟುಂಬ ಸದಸ್ಯರಲ್ಲಿ ಅತೀವ ಸಂತಸ ಮೂಡಿಸಿದೆ. ಇಂದು ಡಿಕೆಶಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ನಂತರ ಸದಾಶಿವನಗರ ನಿವಾಸಕ್ಕೆ ತೆರಳಲಿದ್ದಾರೆ ಎಂಬ ಮಾಹಿತಿ ಇದೆ.