ಬೆಂಗಳೂರು: ಮನೆಯ ಬೀಗ ಮುರಿದು ಚಿನ್ನ, ಬೆಳ್ಳಿ ಹಾಗೂ ಲ್ಯಾಪ್ಟಾಪ್ ಸೇರಿದಂತೆ ಮತ್ತಿತರ ವಸ್ತುಗಳನ್ನು ಕಳವು ಮಾಡಿದ್ದ ಮೂವರು ಕಳ್ಳರನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮಾರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನೆಕೊಳ್ಳಾಲದಲ್ಲಿ ಕಳವು ಮಾಡಿದ್ದ ಹಲಸೂರಿನ ಜೋಗುಪಾಳ್ಯದ ಬಾಲಾಜಿ, ಮುರುಗೇಶ್ ಪಾಳ್ಯದ ರಾಜು, ಜಗದೀಶ ನಗರದ ಕಿರಣ್ ಬಂಧಿತರು. ಈ ಮೂವರು ಕಳ್ಳರಿಂದ 7 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಲ್ಯಾಪ್ಟಾಪ್ ಸೇರಿ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳತನ ಸಂಬಂಧ ದೂರು ದಾಖಲಾಗಿದ್ದು , ಕೃತ್ಯ ನಡೆದ ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದರು. ಈ ಮೇಲ್ಕಂಡ ಆರೋಪಿಗಳ ಬೆರಳು ಮುದ್ರೆ ಪತ್ತೆಯಾಗಿದ್ದು, ಕಳವು ಮಾಡಿದ ದ್ವಿಚಕ್ರ ವಾಹನದ ಸಮೇತ ಹಿಡಿದು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿದಾಗ, ಠಾಣಾ ಸರಹದ್ದಿನಲ್ಲಿ ನಡೆದಿರುವ ಎರಡು ಕಳವು ಪ್ರಕರಣಗಳಲ್ಲಿ ತಾವು ಭಾಗಿಯಾಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಎಂ ಎನ್ ಅನುಚೇತ್, ಮಾರತಹಳ್ಳಿ ಉಪವಿಭಾಗದ ಎಸಿಪಿ ಪಂಪಾಪತಿ ಅವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಪತ್ತೆ ಮಾಡಿದ ಮಾರತಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ್, ಪೊಲೀಸ್ ಸಬ್ಇನ್ಸ್ಪೆಕ್ಟರ್ ನಾಗರಾಜು ಹಾಗೂ ಸಿಬ್ಬಂದಿ ಕಾರ್ಯವೈಖರಿಗೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.