ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ 20 ದಿನಗಳ ಹಿಂದಷ್ಟೇ ಜಾಮೀನು ಪಡೆದು ಜೈಲಿನಲ್ಲಿ ಹೊರಬಂದು ಮತ್ತೆ ಹಳೆ ಕಾಯಕ ಮುಂದುವರೆಸಿದ್ದ. ಯಾರಿಗೂ ಗೊತ್ತಾಗದಂತೆ ಮನೆಯಲ್ಲಿ ಪಿಸ್ತೂಲ್ ಖರೀದಿ ವ್ಯವಹಾರದಲ್ಲಿ ತೊಡಗಿದ್ದ ಪ್ರಮುಖ ಆರೋಪಿ ಸೇರಿದಂತೆ ಮೂವರು ಆರೋಪಿಗಳನ್ನು ಅಕ್ರಮ ಪಿಸ್ತೂಲ್ ಮಾರಾಟ ಪ್ರಕರಣದಡಿ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಸಂಪಿಗೆಹಳ್ಳಿ ರೌಡಿಶೀಟರ್ ಫಯಾಜ್ ವುಲ್ಲಾ, ಶಿವಾಜಿನಗರ ಠಾಣೆ ರೌಡಿಶೀಟರ್ ಮೊಹಮ್ಮದ್ ಅಲಿ ಹಾಗೂ ಸೈಯ್ಯದ್ ಸಿರಾಜ್ ಅಹಮದ್ ಎಂಬುವರನ್ನು ಬಂಧಿಸಿ 3 ಕಂಟ್ರಿ ಮೇಡ್ ಪಿಸ್ತೂಲ್ ಹಾಗೂ 24 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಿಸ್ತೂಲ್ ಮಾರಾಟ ದಂಧೆಯಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಫಯಾಜ್ ವುಲ್ಲಾ ಕಳೆದ 20 ದಿನಗಳ ಹಿಂದೆ ಜಾಮೀನು ಪಡೆದು ಹೊರಬಂದು ಮತ್ತೆ ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದ.
ಮಹಾರಾಷ್ಟ್ರದಲ್ಲಿ ಪಿಸ್ತೂಲ್ ಖರೀದಿ: ಆರೋಪಿಗಳು ಮಹಾರಾಷ್ಟ್ರದ ಶಿರಡಿ ಕೊಪ್ಪರ್ ಗಾವ್ ಬಳಿಯ ಡೀಲರ್‌ಗಳಿಂದ ಪಿಸ್ತೂಲ್‌ಗಳನ್ನು ತಮ್ಮ ಶೋಕಿಗಾಗಿ ಹಾಗೂ ಆತ್ಮರಕ್ಷಣೆಗಾಗಿ ಇಟ್ಟುಕೊಳ್ಳುತ್ತಿದ್ದರು. 50 ರಿಂದ 60 ಸಾವಿರವರೆಗೆ ಪಿಸ್ತೂಲ್ ಖರೀದಿಸಿ ನಗರದಲ್ಲಿ 1 ಲಕ್ಷದವರೆಗ ಮಾರಾಟ ಮಾಡುತ್ತಿದ್ದರು.
ಈ ಹಿಂದೆ ಮಾರ್ಕೆಟ್ ಹಾಗೂ ಬಾಗಲೂರು ಪೊಲೀಸರು ಸುಮಾರು 14 ಪಿಸ್ತೂಲ್ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದರು. ಇದೇ ಆರೋಪದ ಮೇರೆಗೆ ಪೊಲೀಸರು ಬಂಧಿಸಿ ಈತನನ್ನು ಜೈಲಿಗಟ್ಟಿದ್ದರು. ಜಾಮೀನು ಪಡೆದು ಹೊರಬಂದ ಬಳಿಕ ಇಬ್ಬರು ಆರೋಪಿಗಳ ಸಂಪರ್ಕ ಸಾಧಿಸಿ ದಂಧೆಯಲ್ಲಿ ಸಕ್ರಿಯವಾಗಿದ್ದರು. ಸದ್ಯ ಮೂವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಮೂವರು ಆರೋಪಿಗಳ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್: ಮೂಡಬಿದಿರೆ ಆಳ್ವಾಸ್ ಕಾಲೇಜಿನ ಇಬ್ಬರು ಕ್ರೀಡಾಪಟುಗಳು ಆಯ್ಕೆ