ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆ ವೇಳೆ ಹಾವು-ಮುಂಗುಸಿಯಂತಿದ್ದವರು ಇದೀಗ ಕುಚುಕು ಗೆಳೆಯರಂತೆ ಮತಯಾಚಿಸುತ್ತಿದ್ದಾರೆ.
ಕೆಆರ್‌ಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಹಾಗೂ ಬಿಜೆಪಿ ಮಾಜಿ ಶಾಸಕ ನಂದೀಶ್ ರೆಡ್ಡಿ ಅವರು ಹಿಂದಿದ್ದ ಮುನಿಸನ್ನು ಮರೆತು ಒಂದೇ ಬೈಕ್‌ನಲ್ಲಿ ಸಂಚರಿಸುವ ಮೂಲಕ ಮತಬೇಟೆಯಾಡಿದ್ದಾರೆ.
2013 ಹಾಗೂ 2018ನೇ ಸಾಲಿನ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ನಂದೀಶ್ ರೆಡ್ಡಿ ಅವರು ಕಾಂಗ್ರೆಸ್ನ ಬೈರತಿ ಬಸವರಾಜ್ ವಿರುದ್ಧ ಪರಾಭವಗೊಂಡಿದ್ದರು. ಇಬ್ಬರ ನಡುವೆಯೂ ವಿವಿಧ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಮೂಡಿಸಿಕೊಂಡು ಬದ್ದ ವೈರಿಗಳಾಗಿದ್ದರು.
ಆದರೆ, ಬದಲಾದ ರಾಜಕೀಯ ಸನ್ನಿವೇಶದಿಂದ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿರುವ ಬಸವರಾಜ್ ಕೆಆರ್‌ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಟಿಕೆಟ್ ಆಕ್ಷಾಂಕಿಯಾಗಿದ್ದ ನಂದೀಶ್ ರೆಡ್ಡಿಗೆ ಬಿಎಂಟಿಸಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಹಿಂದಿನ ವೈಷಮ್ಯ ಮರೆತು ಇಬ್ಬರು ಒಂದೇ ಬೈಕ್‌ನಲ್ಲಿ ಮತಯಾಚನೆ ಮಾಡುತ್ತಿದ್ದಾರೆ.