ಬೆಂಗಳೂರು: ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಮೂರನೇ ತಿದ್ದುಪಡಿ ವಿಧೇಯಕ ಪರಿಷತ್ ನಲ್ಲಿ ಅಂಗೀಕಾರವಾಯಿತು. ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಈ ಮಸೂದೆಯನ್ನು ಸಚಿವ ಜೆ.ಸಿ. ಮಾಧುಸ್ವಾಮಿ ಪರಿಷತ್ನಲ್ಲಿ ಮಂಡಿಸಿ ಅಂಗೀಕರಿಸುವಂತೆ ಮನವಿ ಮಾಡಿದರು.
ಲೇಔಟ್ ಅಭಿವೃದ್ಧಿ ಮಾಡುತ್ತಿದ್ದ ಖಾಸಗಿಯವರಿಗೆ 2015ರ ನಂತರ ಬಂದ ನಿಯಮಗಳು ಸಾಕಷ್ಟು ಕ್ಲಿಷ್ಟವಾಗಿದ್ದು, ಕೆಲ ಸರಳೀಕರಣಕ್ಕಾಗಿ ಮನವಿ ಮಾಡಿದ್ದರು. ಆದ್ದರಿಂದ ಕೊಂಚ ನಿರಾಳವಾಗಿಸಿ ಅವರಿಗೆ ಅವಕಾಶ ನೀಡಿದ್ದೇವೆ. ಶೇ.40, ನಂತರ ಶೇ.30 ಹಾಗೂ ಮೂರನೇ ಹಂತದಲ್ಲಿ ಉಳಿದ ಶೇ.30 ರಷ್ಟು ಪರವಾನಗಿ ನೀಡಬೇಕೆಂದು ಕೇಳಿದ್ದಾರೆ. 2015 ರಲ್ಲಿ ಆದ ಬದಲಾವಣೆಯಿಂದ ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಸೈಟ್ ಮಾರಾಟ ಸಾಧ್ಯವಾಗಿಲ್ಲ. ಸಾಕಷ್ಟು ಸಮಸ್ಯೆಗಳು ಇದ್ದವು. ಅದನ್ನು ಬದಲಿಸಿದ್ದೇವೆ. 50 ಎಕರೆ ಭೂಮಿಯಲ್ಲಿ ಎಲ್ಲಿಯೋ ಶೇ.40 ರಷ್ಟು ಅಭಿವೃದ್ಧಿ ಪಡಿಸಿ ಸೈಟ್ ಮಾರಿದರೆ, ಮುಂದಿನ ಅಭಿವೃದ್ಧಿ ಆರೇಳು ವರ್ಷ ಆದರೂ ಪ್ರಗತಿ ಕಂಡಿರಲಿಲ್ಲ. ಹೀಗಾಗಿ ಮೂರು ಹಂತದಲ್ಲಿ ಅಭಿವೃದ್ಧಿ ಮಾಡಲು ಸೂಚಿಸಲಾಗಿದೆ ಎಂದು ವಿವರಿಸಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಶೇ.100 ರಷ್ಟು ಅಭಿವೃದ್ಧಿ ಪಡಿಸಿ ಪರವಾನಗಿ ಪಡೆಯಿರಿ ಎಂದು ಸೂಚಿಸಿದ್ದರು. ಆದರೆ, ಇದು ಮಾರಾಟಗಾರರಿಗೆ ಸಾಕಷ್ಟು ಸಮಸ್ಯೆಯಾಗಿತ್ತು. ಆರೇಳು ವರ್ಷ ಲೇಔಟ್ ಸರಿಪಡಿಸಲಾಗದೇ, ಮಾರಾಟವಾಗದೇ ಕಷ್ಟಕ್ಕೆ ಒಳಗಾಗಿದ್ದರು. ಹಂತಹಂತವಾಗಿ ಒಂದೊಂದು ಭಾಗ ಅಭಿವೃದ್ಧಿ ಪಡಿಸಿದರೆ ಮಾರಾಟಕ್ಕೆ ಅವಕಾಶವಾಗಲಿದೆ. ಏಕಕಾಲಕ್ಕೆ ಲೇಔಟ್ ಸಿದ್ದಪಡಿಸುವುದು ಅಭಿವೃದ್ಧಿದಾರರಿಗೆ ಸಮಸ್ಯೆ ಆಗಲಿದೆ. ಹಾಗಾಗಿ ಸಣ್ಣ ಬದಲಾವಣೆ ಮಾಡಿದ್ದೇವೆ ಒಪ್ಪಿಗೆ ಕೊಡಿ ಎಂದು ಮನವಿ ಮಾಡಿದರು.
ಬಳಿಕ ಸದಸ್ಯರಾದ ಪಿ.ಆರ್. ರಮೇಶ್, ವಸಂತ್ ಕುಮಾರ್, ಮರಿತಿಬ್ಬೇಗೌಡ, ಅಪ್ಪಾಜಿಗೌಡ, ನಾರಾಯಣಸ್ವಾಮಿ, ಕೆ.ಸಿ. ಕೊಂಡಯ್ಯ ಮತ್ತಿತರ ಸದಸ್ಯರು ಮಾತನಾಡಿದರು. ಚರ್ಚೆ ನಂತರ ವಿಧೇಯಕ ಅನುಮೋದನೆಗೊಂಡಿತು.
ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರ ವಿಧೇಯಕ ಅಂಗೀಕೃತ
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಸಾಕಷ್ಟು ದೇವಾಲಯಗಳಿವೆ. ಒಂದು ಕಿ.ಮೀ ವ್ಯಾಪ್ತಿಯಲ್ಲಿ 40 ದೇವಾಲಯಗಳು ಇದ್ದು ಅದನ್ನು ಅಭಿವೃದ್ಧಿ ಮಾಡಲು 100 ಕೋಟಿ ರೂ. ನೀಡಲಿದ್ದೇವೆ. ಈ ಸಂಬಂಧ ಒಂದು ತಂಡ ರಚಿಸಿ ಅಭಿವೃದ್ಧಿಗೆ ಅವಕಾಶ ಮಾಡಿಕೊಡುತ್ತೇವೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. ಪ್ರಸ್ತಾವನೆ ಪರಿಷತ್ನಲ್ಲಿ ಅಂಗೀಕೃತವಾಯಿತು.
ವರ್ಗಾವಣೆ ನಿಯಂತ್ರಣ ವಿಧೇಯಕ
ಸರ್ಕಾರಿ ಸಿವಿಲ್ ಸೇವೆಗಳ ತಾಂತ್ರಿಕ ಶಿಕ್ಷಣ ಇಲಾಖೆ ಸಿಬ್ಬಂದಿ ವರ್ಗಾವಣೆ ನಿಯಂತ್ರಣಗೊಳಿಸುವ ವಿಧೇಯಕ ಹಾಗೂ ಸರ್ಕಾರಿ ಸಿವಿಲ್ ಸೇವೆಗಳ ಕಾಲೇಜು ಶಿಕ್ಷಣ ಇಲಾಖೆ ಸಿಬ್ಬಂದಿ ವರ್ಗಾವಣೆ ನಿಯಂತ್ರಣಗೊಳಿಸುವ ವಿಧೇಯಕ, ಕರ್ನಾಟಕ ನ್ಯಾಯಾಲಯಗಳ ಶುಲ್ಕಗಳು, ದಾವೆಗಳ ಮೌಲ್ಯ ನಿರ್ಣಯ ವಿಧೇಯಕ ಸಹ ಪರಿಷತ್ನಲ್ಲಿ ಅನುಮೋದನೆ ಪಡೆಯಲಾಯಿತು.