ಬೆಂಗಳೂರು : ಬಸ್ ಚಾಲಕರು ಹಾಗೂ ನಿರ್ವಾಹಕರಿಗೆ ಟ್ರಾಫಿಕ್, ಧೂಳು, ಹೊಗೆಯಲ್ಲಿ ಬಸ್ ಚಲಾಯಿಸುವುದು ಜೊತೆಗೆ ಈ ಎಲ್ಲದರ ನಡುವೆ ಕೆಲಸದ ಒತ್ತಡದಲ್ಲಿ ಬಸ್ ಚಾಲಕರಿಗೆ ತಮ್ಮ ಆರೋಗ್ಯದ ಕಡೆ ಗಮನಹರಿಸಲು ಆಗುವುದಿಲ್ಲ. ಅದರಲ್ಲೂ ಕೋವಿಡ್ ಸಮಯದಲ್ಲಿ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸಲಾಗುವುದಿಲ್ಲ.
ಹೀಗಾಗಿ ಕೆಎಸ್ಆರ್‌ಟಿಸಿ ಕೋವಿಡ್ ಸಮಯದಲ್ಲಿ ಸಿಬ್ಬಂದಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಾಗೂ ಶ್ವಾಸಕೋಶ ಕಾಪಾಡುವ "ಸಿಂಹ ಕ್ರಿಯಾ ಯೋಗ" ಕಾರ್ಯಕ್ರಮವನ್ನ ಈಶಾ ಫೌಂಡೇಶನ್ ಅವರ ಸಹಯೋಗದೊಂದಿಗೆ ಹಮ್ಮಿಕೊಂಡಿತ್ತು.
ಇಂದು ಕೆಎಸ್ಆರ್‌ಟಿಸಿ ಎಂ.ಡಿ ಶಿವಯೋಗಿ ಸಿ.ಕಳಸದ, ಕೆ ಎಸ್ ಆರ್ ಟಿ ಸಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ನಂತರ ಮಾತನಾಡಿ, ನಿಗಮದ ಸಿಬ್ಬಂದಿ ಶ್ರಮ ಜೀವಿಗಳು, ಹಗಲು ರಾತ್ರಿಯನ್ನದೇ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ , ಸಾವಿರಾರು ವರುಷಗಳ ಇತಿಹಾಸ ಹೊಂದಿರುವ ಯೋಗ ಕಾರ್ಯಕ್ರಮವು ದೈಹಿಕ, ಮಾನಸಿಕ ಹಾಗೂ ಭೌತಿಕ ಆರೋಗ್ಯಕ್ಕೆ ಸಹಕಾರಿಯಾಗಲಿದೆ.
ಈಶಾ ಫೌಂಡೇಶನ್ ಅವರ ಯೋಗ ಕಾರ್ಯಕ್ರಮ ಅತ್ಯಂತ ಪರಿಣಾಮಕಾರಿಯಾಗಿದ್ದು, ಮನೆಯಲ್ಲಿಯೇ ಮಾಡಬಹುದಾದ ಸರಳ ಕ್ರಿಯೆ ಇದಾಗಿದೆ. ಇನ್ನು ಕಾರ್ಯಕ್ರಮ ಕನ್ನಡದಲ್ಲಿಯೇ ರೂಪಿಸಲಾಗಿದ್ದು, ಸಿಬ್ಬಂದಿ ಪ್ರಶ್ನೆಗಳಿಗೆ ಕಾರ್ಯಕ್ರಮದ ಕೊನೆಯಲ್ಲಿ ಉತ್ತರಿಸಲಾಗುವುದು.
ನಾಳೆ ಅಂದರೆ, 1.07.2021 ರಿಂದ ಬೆಳಗ್ಗೆ 7 ಗಂಟೆಗೆ ಹಾಗೂ ಸಂಜೆ 6.30ಗೆ ನಿತ್ಯ ಒಂದು ವಾರದ ಕಾಲ ಎಲ್ಲ ಅಧಿಕಾರಿ - ಸಿಬ್ಬಂದಿಗಳ ಮೊಬೈಲ್‌ಗಳಿಗೆ ಕಾರ್ಯಕ್ರಮದ ಯೂಟ್ಯೂಬ್ ಲಿಂಕ್ ಕಳಿಸಿ, ಸಮಸ್ತ ಸಿಬ್ಬಂದಿಗಳು ಹಾಗೂ ಕುಟುಂಬದವರಿಗೆ ಅನುಕೂಲವಾದ ಸಮಯದಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದೆ.
ಇದನ್ನೂ ಓದಿ : ನಾಳೆಯಿಂದ ಇಡೀ ದಿನ ಸಂಚರಿಸಲಿದೆ 'ನಮ್ಮ ಮೆಟ್ರೋ' : ಟೋಕನ್ ಟಿಕೆಟ್ ನೀಡಲು ನಿರ್ಧಾರ
ಕೋವಿಡ್‌ನಿಂದಾಗಿ ಜನರ ಜೀವನಶೈಲಿ ಬದಲಾವಣೆಯಾಗಬೇಕಾಗಿರುವುದು ಅನಿವಾರ್ಯವಾಗಿದೆ. ಅದರಲ್ಲಿಯೂ ಯೋಗ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ. ಈಶಾ ಫೌಂಡೇಶನ್ ಅವರು ನಮ್ಮ ಸಿಬ್ಬಂದಿಗಳಿಗಾಗಿ ಸಿದ್ಧಪಡಿಸಿರುವ ಈ ಯೋಗ ಕಾರ್ಯಕ್ರಮ ಸಿಬ್ಬಂದಿಗಳ ಆರೋಗ್ಯ ಸ್ನೇಹಿ ಉಪಕ್ರಮವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಈಶಾ ಫೌಂಡೇಶನ್ ಅವರಿಂದ ರಾಧಿಕ ಶ್ರೀನಾಥ್, ನಿಗಮದ ಹಿರಿಯ ಅಧಿಕಾರಿಗಳು ಸಿಬ್ಬಂದಿ ಭಾಗವಹಿಸಿದ್ದರು..