ಬೆಂಗಳೂರು: ನಗರದಲ್ಲಿ ಸುರಿದ ಸಾಧಾರಣ ಮಳೆಗೆ ಮಲ್ಲೇಶ್ವರಂ, ಶೇಷಾದ್ರಿಪುರಂ, ಮೆಜೆಸ್ಟಿಕ್ ಸುತ್ತಮುತ್ತ ರಸ್ತೆಯಲ್ಲಿ ಗುಂಡಿಗಳು ಬಾಯ್ತೆರೆದಿದ್ದು, ಸರ್ಕಾರ ಹಾಗೂ ಪಾಲಿಕೆಯ ಹಗ್ಗಜಗ್ಗಾಟದಲ್ಲಿ ಸಾರ್ವಜನಿಕರು ಪೇಚಿಗೆ ಸಿಲುಕುವ ಹಾಗಾಗಿದೆ.
ಈ ಬಗ್ಗೆ ಪಾಲಿಕೆ ಆಡಳಿತ ಪಕ್ಷದ ನಾಯಕ ವಾಜಿದ್ರನ್ನ ಕೇಳಿದ್ರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅದಕ್ಕಾಗಿಯೇ ವೈಟ್ ಟಾಪಿಂಗ್ ರಸ್ತೆಗಳನ್ನ ಮಾಡುತ್ತಿರೋದು. ಡಾಂಬಾರು ರಸ್ತೆಗಳಲ್ಲಿ ಗುಂಡಿ ಬೀಳುವುದು ಸಾಮಾನ್ಯ. ಆದ್ರೆ ಈಗ ಸರ್ಕಾರ ಹೊಸ ವೈಟ್ ಟಾಪಿಂಗ್ ರಸ್ತೆ ಮಾಡದಂತೆ ಸೂಚನೆ ನೀಡಿದೆ. ಸರ್ಕಾರ ಹೇಳಿದಂತೆ ಬಿಬಿಎಂಪಿ ನಡೆದುಕೊಳ್ಳಬೇಕಾಗಿದೆ ಎಂದು ಪರೋಕ್ಷವಾಗಿ ನೂತನ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಟಾರ್ ರಸ್ತೆಯನ್ನೂ ಕಳಪೆ ಗುಣಮಟ್ಟದಲ್ಲಿ ನಿರ್ಮಾಣ ಮಾಡಿದ್ದಕ್ಕಾಗಿಯೇ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗ್ತಿರೋದು ಎಂಬುದನ್ನು ಮರೆಮಾಚಿ, ವೈಟ್ ಟಾಪಿಂಗ್ ಇಲ್ಲದಿರುವ ಕಾರಣ ಗುಂಡಿಗಳು ಬೀಳ್ತಿವೆ ಎಂದು ವಾಜಿದ್ ಸಬೂಬು ಹೇಳುತ್ತಿದ್ದಾರೆ.
ಇನ್ನು, ಈ ಬಗ್ಗೆ ಮೇಯರ್ ಗಂಗಾಂಬಿಕೆ ಅವರನ್ನು ಕೇಳಿದ್ರೆ, ರಸ್ತೆಗುಂಡಿಗಳಿಂದ ಜನರಿಗೆ ಸಮಸ್ಯೆಯಾದ್ರೆ, ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಬಿಬಿಎಂಪಿಯಲ್ಲಿ ರಸ್ತೆಗುಂಡಿ ಮುಚ್ಚಲು ಯಾವುದೇ ಹಣದ ಕೊರತೆ ಇಲ್ಲ. ಈಗಾಗಲೇ ಅನುದಾನ ನೀಡಲಾಗಿದೆ. ರಸ್ತೆಗುಂಡಿ ಇರದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದು ಎಂದು ವಾರ್ನಿಂಗ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.