ಬೆಂಗಳೂರು : ಕೊರೊನಾ ಹೊಡೆತಕ್ಕೆ ನಮ್ಮ ಮೆಟ್ರೋ ಸೇವೆಯು ಬರೋಬ್ಬರಿ 5 ತಿಂಗಳು ಸ್ಥಗಿತಗೊಂಡಿತ್ತು. ನಿತ್ಯ ಲಕ್ಷಾಂತರ ಜನರನ್ನ ಹೊತ್ತೊಯ್ಯುತ್ತಿದ್ದ ನಮ್ಮ ಮೆಟ್ರೋ ಇದೀಗ ಮತ್ತೆ ತನ್ನ ಸಂಚಾರವನ್ನ ಇಂದಿನಿಂದ ಶುರು ಮಾಡಲಿದೆ. ನೇರಳೆ ಮಾರ್ಗದಲ್ಲಿ ಮೆಟ್ರೋ ಆರಂಭವಾದರೆ ಸೆಪ್ಟೆಂಬರ್ 9ನೇ ತಾರೀಖಿನಿಂದ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ.
ನೇರಳೆ ಮಾರ್ಗ ಸೆಪ್ಟೆಂಬರ್ 7 ರಿಂದ 10 ತಾರೀಖಿನವರಿಗೆ ಬೆಳಗ್ಗೆ 8 ರಿಂದ ಬೆಳಗ್ಗೆ 11ರವರಿಗೆ ಮತ್ತು ಸಂಜೆ 4-30 ರಿಂದ ರಾತ್ರಿ 7-30ರವರಿಗೆ 5 ನಿಮಿಷಗಳ ಅಂತರಲ್ಲಿ ಮಾತ್ರ ಮೆಟ್ರೋ ಓಡಾಟ ನಡೆಯಲಿದೆ. ಇತ್ತ ಹಸಿರು ಮಾರ್ಗದಲ್ಲಿ ಸೆಪ್ಟೆಂಬರ್ 9 -10ನೇ ತಾರೀಖನವರೆಗೆ ಬೆಳಗ್ಗೆ 8 ರಿಂದ 11ರವರಿಗೆ ಸಂಜೆ 04-30 ರಿಂದ ರಾತ್ರಿ 07-30ರವರಿಗೆ 5 ನಿಮಿಷಗಳ ಅಂತರದಲ್ಲಿ ಮೆಟ್ರೋ ಓಡಾಟ ನಡೆಯಲಿದೆ.
ಇನ್ನು ಸೆಪ್ಟೆಂಬರ್ 11 ರಿಂದ ಎಲ್ಲಾ ರೈಲುಗಳು ಬೆಳಗ್ಗೆ 7 ರಿಂದ ರಾತ್ರಿ 9ರವರೆಗೆ ಎರಡು ಮಾರ್ಗದಲ್ಲಿ ಮೆಟ್ರೋ ಓಡಾಟ ಮಾಡಲಿದೆ. ಜನದಟ್ಟಣೆಯ ಅವಧಿಯಲ್ಲಿ ಪ್ರತಿ 5 ನಿಮಿಷಕ್ಕೊಮ್ಮೆ ಹಾಗೂ ಬೇರೆ ಸಮಯದಲ್ಲಿ 10 ನಿಮಿಷಗಳ ಅಂತರದಲ್ಲಿ ಮೆಟ್ರೋ ಓಡಾಟ ನಡೆಸಲಿದೆ.
ಮೆಟ್ರೋದಲ್ಲಿ ಓಡಾಟ ನಡೆಸುವ ಪ್ರಯಾಣಿಕರಿಗೆ ಷರತ್ತುಗಳು ಅನ್ವಯ...
- ಮೆಟ್ರೋದಲ್ಲಿ ಓಡಾಡುವವರು ಸ್ಮಾರ್ಟ್ಕಾರ್ಡ್ ಇಟ್ಟುಕೊಳ್ಳಬೇಕು
- ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ
- ಪ್ರವೇಶ ದ್ವಾರ, ನಿರ್ಗಮನದ ಹಾಗೂ ಫ್ಲಾಟ್ ಫಾರ್ಮ್ನಲ್ಲಿ ಹಳದಿ ಗುರುತಿನ ಜಾಗದಲ್ಲಿ ನಿಲ್ಲಬೇಕು
- ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು
- 50 ಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣದಲ್ಲಿ ನಿಲ್ಲುವಂತಿಲ್ಲ
- ಆರು ಬೋಗಿ ರೈಲಿನಲ್ಲಿ 400 ಪ್ರಯಾಣಿಕರಿಗೆ ಮಾತ್ರ ಅವಕಾಶ
- ರೈಲಿನಲ್ಲಿ ಗುರುತಿಸಿರುವ ಆಸನಗಳನ್ನ ಮಾತ್ರ ಕೂರಲು ಅವಕಾಶ
- ಎಲ್ಲಾ ಪ್ರಯಾಣಿಕರಿಗೆ ದೇಹದ ಉಷ್ಣಾಂಶ ಪರೀಕ್ಷೆ ಮಾಡಲಾಗುತ್ತದೆ
- ಎಸ್ಕೇಲೇಟರ್ಗಳನ್ನ ಬಳಸುವ ಪ್ರಯಾಣಿಕರು ತಮ್ಮ ಮುಂದಿರುವ ಪ್ರಯಾಣಿಕರಿಂದ ಒಂದು ಮೆಟ್ಟಿಲು ಅಂತರ ಕಾಪಾಡಬೇಕು
- 60 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಇದ್ರೆ ಮಾತ್ರ ಓಡಾಟಕ್ಕೆ ಅನುಮತಿ
ಟಿಕೆಟ್ ಕಾಯಿನ್ ಮಾರಾಟ ನಿಷೇಧ
ಟೋಕನ್ ಮಾರಾಟವನ್ನು ನಿಷೇಧಿಸಿದ ಕಾರಣ ಪ್ರಯಾಣಿಕರು ಪ್ರಯಾಣಿಸಲು ಸ್ಮಾರ್ಟ್ ಕಾರ್ಡ್ಗಳನ್ನು ಮಾತ್ರ ಉಪಯೋಗಿಸಬಹುದು. ನಿಲ್ದಾಣಕ್ಕೆ ಒಳಬರುವ ಮುನ್ನ ಪ್ರಯಾಣಕ್ಕೆ ಬೇಕಾಗಿರುವ ಸಾಕಷ್ಟು ಮೊತ್ತವು ಸ್ಮಾರ್ಟ್ಕಾರ್ಡ್ನಲ್ಲಿ ಇದೆ ಎಂದು ಖಚಿತ ಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.