ಬೆಂಗಳೂರು: ಭಾರತದ ಬೇಹುಗಾರಿಕಾ ಅಧಿಕಾರಿ ಮಾಸ್ಟರ್ ಮೈಂಡ್ ಅಜಿತ್ ದೋವಲ್ ನೀಡಿದ ಮಾಹಿತಿಯಿಂದ ಪಿಎಫ್ಐ ಬ್ಯಾನ್ ಆಗಿದೆ ಎಂಬ ಮಾಹಿತಿ ಲಭಿಸಿದೆ. ಪಿಎಫ್ಐ ಮುಖಂಡರ ಬಂಧನದ ಹಿಂದೆ ಅಜಿತ್ ದೋವಲ್ ಅವರ ವಿದೇಶಿ ಭೇಟಿ ಅಡಗಿದೆ ಎಂಬ ವಿಚಾರಗಳು ಗೊತ್ತಾಗಿವೆ.
ರಷ್ಯಾಗೆ ದೋವಲ್ ಭೇಟಿ: ಅಜಿತ್ ದೋವಲ್ ಇತ್ತೀಚೆಗೆ ರಷ್ಯಾಗೆ ಕೆಲ ರಾಜತಾಂತ್ರಿಕ ವಿಚಾರ ಸಂಬಂಧ ತೆರಳಿದ್ದರು. ಇದೇ ವೇಳೆ ಟರ್ಕಿ ಮೂಲದ ವ್ಯಕ್ತಿಯೊಬ್ಬ ರಷ್ಯಾ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ವಿಚಾರಣೆ ವೇಳೆ ಭಾರತದ ಹಲವು ರಾಜಕೀಯ ನಾಯಕರ ಹಾಗೂ ಹಿಂದೂ ಮುಖಂಡರನ್ನ ಹತ್ಯೆ ಮಾಡಲು ಪ್ಲಾನ್ ರೂಪಿಸಿದ್ದ ಬಗ್ಗೆ ಮಾಹಿತಿ ಹೊರಬಿದ್ದಿತ್ತು. ಈ ಮಾಹಿತಿಯನ್ನು ಆಳಕ್ಕೆ ಇಳಿದು ತನಿಖೆ ನಡೆಸಿದಾಗ, ಅದಾಗಲೇ ಟರ್ಕಿಯ ಫಂಡ್ ಭಾರತದಾದ್ಯಂತ ಹಂಚಿಕೆಯಾಗಿದೆ ಎಂಬ ಮಾಹಿತಿ ರಿವೀಲ್ ಆಗಿತ್ತು.
ಭಾರತ ಸರ್ಕಾರಕ್ಕೆ ಮಾಹಿತಿ ನೀಡಿದ್ದ ದೋವಲ್: ಅದರಲ್ಲೂ ಪಿಎಫ್ಐ ಹಾಗೂ ಅದರ ಅಂಗಸಂಸ್ಥೆಗಳಿಗೆ ಹಣ ವರ್ಗಾವಣೆಯಾಗಿರೋದು ಬೆಳಕಿಗೆ ಬಂದಿದೆ. ಹೊಸದಾಗಿ ತರಬೇತಿ ಪಡೆದ ಯುವಕರನ್ನ ಬಳಸಿಕೊಂಡು ಸುಪಾರಿ ನೀಡಿ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಸಹ ಗೊತ್ತಾಗಿತ್ತು. ಈ ಬಗ್ಗೆ ತಕ್ಷಣವೇ ಕಾರ್ಯಪ್ರವೃತ್ತರಾದ ದೋವಲ್ ಭಾರತ ಸರ್ಕಾರಕ್ಕೆ ಈ ಮಾಹಿತಿ ನೀಡಿದ್ದರು. ಅಲ್ಲದೇ ಪಿಎಫ್ಐ ಸಾಕಷ್ಟು ಕೇಸ್ನಲ್ಲಿ ಭಾಗಿಯಾಗಿರುವ ಡೇಟಾ ಕೂಡ ಸರ್ಕಾರದ ಕೈ ಸೇರಿತ್ತು.
ಕೋಟಿ ಕೋಟಿ ಹಣ ಭಾರತಕ್ಕೆ ರವಾನೆ: ಇದರಿಂದ ಉಗ್ರ ಚಟುವಟಿಕೆಯ ಜೊತೆ ಕೈಜೋಡಿಸುವ ಕೆಲಸವನ್ನು ಪಿಎಫ್ಐ ಮಾಡುತ್ತಿರುವುದು ಪಕ್ಕಾ ಆಗಿತ್ತು. ಟ್ರಸ್ಟ್ ಹೆಸರಿನಲ್ಲಿ ಕೋಟಿ ಕೋಟಿ ಫಾರಿನ್ ಫಂಡ್ ಕೂಡ ಭಾರತಕ್ಕೆ ರವಾನೆಯಾಗಿತ್ತು. ಈ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ್ದ ಕೇಂದ್ರ ಸರ್ಕಾರ ಪಿಎಫ್ಐ ಬ್ಯಾನ್ ಮಾಡಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇದಕ್ಕೂ ಮುನ್ನ ಟ್ರಸ್ಟ್ ಹೆಸರಲ್ಲಿ ಕೋಟಿ ಕೋಟಿ ಹಣವನ್ನ ಅಕೌಂಟ್ಗೆ ಹಾಕುತ್ತಿದ್ದವರ ಬಗ್ಗೆ ಗಮನ ಹರಿಸಲಾಗಿತ್ತು. ಎನ್ಐಎ, ಐಬಿ ಸೇರಿದಂತೆ ಗುಪ್ತಚರ ಇಲಾಖೆಗಳು ಇದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದವು. ಒಟ್ಟು 340 ಟ್ರಸ್ಟ್ಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿದ್ದ, ಏಜೆನ್ಸಿಗಳ ಸಾಕ್ಷಿ ಅನ್ವಯ ಪಿಎಫ್ಐ ಸಂಘಟನೆಯ ಕೆಲ ಮುಖಂಡರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಸ್ಫೋಟಕ ಮಾಹಿತಿ ಬಹಿರಂಗ: ಅಪರಾಧ ನಡೆಸಲು ತರಬೇತಿ ಪಡೆಯುತ್ತಿದ್ದರಾ ಪಿಎಫ್ಐ ಮುಖಂಡರು?
ವೆಪನ್ನಿಂದ ಹಿಡಿದು ಬಾಂಬ್ವರೆಗೂ ಟ್ರೈನಿಂಗ್ ಕೊಡುವ ಕೆಲಸವನ್ನು ಕೆಲ ವ್ಯಕ್ತಿಗಳು ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆಯಲಾಗಿತ್ತು. ನಿಷೇಧಿತ ಸಿಮಿ ಸಂಘಟನೆಯಿಂದ ಹೊರಬಂದ ಕ್ರಿಮಿಗಳ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚು ನಿಗಾ ಇಟ್ಟಿತ್ತು. ಭಾರತಕ್ಕೆ ಟರ್ಕಿಯ ಹಣ ಹರಿದುಬಂದಿದ್ರೆ, ರಕ್ತಪಾತಕ್ಕೆ ಕಾರಣವಾಗುತ್ತಿತ್ತು ಎಂಬ ಭಯಾನಕ ವಿಷಯ ಇದೀಗ ರಿವೀಲ್ ಆಗಿದೆ.