ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ಶಿಕ್ಷಣ ಸದಾ ಹರಿಯುತ್ತಿರುವ ನದಿಯಂತೆ ಪ್ರವಹಿಸಬೇಕಾಗುತ್ತೆ. ಈ ಕಾರಣದಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯು ಸದ್ಯದ ಕೊರೊನಾ ವಿಷಮ ಪರಿಸ್ಥಿತಿಯಲ್ಲೂ, ಪಿಯುಸಿ ವಿದ್ಯಾರ್ಥಿಗಳ ಕಲಿಕೆಯ ನಿರಂತರತೆಯನ್ನು ಕಾಪಾಡಲು ಮುಂದಾಗಿದೆ.
ಕಲಿಕೆಯಲ್ಲಿ ತೊಡಗುವಂತೆ, ಆ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ತಮ್ಮ ಪ್ರತಿಭೆಯನ್ನು ಅನಾವರಣಗೊಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕೆಂಬ ಸದುದ್ದೇಶ ಹೊಂದಿದೆ. ಹೀಗಾಗಿ ಇಲಾಖೆಯು ಎಸ್.ಸಿ.ಹೆಚ್ ಫೌಂಡೇಶನ್ ಸಹಯೋಗದಲ್ಲಿ 'ಜ್ಞಾನ ವಿಜ್ಞಾನ ತರಂಗ' ಎಂಬ ವಿನೂತನ ಕಾರ್ಯಕ್ರಮದಡಿಯಲ್ಲಿ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳು ಕರ್ನಾಟಕ ಸಾಮಾನ್ಯ ಪ್ರವೇಶ ( ಸಿಇಟಿ) ಪರೀಕ್ಷೆಗೆ ತಯಾರಾಗಲು ಉಚಿತ ಆನ್‌ಲೈನ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಈಗಾಗಲೇ 60 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದುವರೆಗೂ ನೋಂದಣಿಯಾಗದ ವಿದ್ಯಾರ್ಥಿಗಳು https://forms.gle/vdFiC1vAb5pg1F7i8 ಲಿಂಕ್ ಬಳಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ವಿಜ್ಞಾನ ವಿಷಯಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳಲ್ಲಿ ತಲಾ 25 ಅಧಿವೇಶನಗಳು ಹಾಗೂ ತಲಾ ಒಂದೊಂದು ಅಧಿವೇಶನ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದಕ್ಕೆ ಮೀಸಲಿಡಲಾಗಿದೆ.
ಯಾವಾಗ ಈ ಕಾರ್ಯಕ್ರಮ?: ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಇಂದಿನಿಂದ ಪ್ರತಿದಿನ ಸಂಜೆ 05.00 ಗಂಟೆಯಿಂದ ರಾತ್ರಿ 08.00 ಗಂಟೆಯವರೆಗೆ ನೇರವಾಗಿ ವೀಕ್ಷಿಸಬಹುದಾಗಿದೆ. ಈ ಕಾರ್ಯದಲ್ಲಿ ರಾಜ್ಯದ 100ಕ್ಕೂ ಹೆಚ್ಚು ನುರಿತ ವಿಷಯ ತಜ್ಞರು ತರಬೇತಿ ನೀಡಲಿದ್ದಾರೆ. ಇದು ಪಿಯು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಯೋಜನೆಯಾಗಿದ್ದು, ರಾಜ್ಯದ ಹಲವಾರು ವಿಷಯ ತಜ್ಞರ ಮಾರ್ಗದರ್ಶನ ಒಂದೇ ವೇದಿಕೆಯಿಂದ ಸಿಗಲಿದ್ದು, ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿ ವೃಂದವು ಮನೆಯಲ್ಲೇ ಕುಳಿತು ಪಡೆದುಕೊಳ್ಳಬೇಕೆಂದು ಪಿಯು ಬೋರ್ಡ್ ನಿರ್ದೇಶಕಿ ಸ್ನೇಹಲ್ ಮನವಿ ಮಾಡಿದ್ದಾರೆ.
ಓದಿ: ಉಡುಪಿಯಲ್ಲೊಬ್ಬ ಮ್ಯಾಗ್ನೆಟಿಕ್ ಮ್ಯಾನ್: ದೇಹಕ್ಕೆ ಅಂಟಿಕೊಳ್ಳುತ್ತೆ ಲೋಹದ ವಸ್ತುಗಳು!