ಬೆಂಗಳೂರು: ಜಾತಿಗಳ ಹೆಸರಲ್ಲಿ ನಿಗಮ-ಮಂಡಳಿಗಳನ್ನು ರಚಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು(PIL) ಸಂಪೂರ್ಣ ರಾಜಕೀಯ ಪ್ರೇರಿತವಾಗಿವೆ. ಹೀಗಾಗಿ, ಅರ್ಜಿಗಳು ವಿಚಾರಣೆಗೆ ಪರಿಗಣಿಸುವ ಅರ್ಹತೆ ಹೊಂದಿಲ್ಲ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದೆ.
ಜಾತಿವಾರು ನಿಗಮ-ಮಂಡಳಿಗಳ ಸ್ಥಾಪನೆ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಪಿಐಎಲ್ಗಳು ರಾಜಕೀಯ ಪ್ರೇರಿತವಾಗಿದ್ದು, ವಿಚಾರಣೆಗೆ ಪರಿಗಣಿಸುವ ಅರ್ಹತೆ ಹೊಂದಿಲ್ಲ. ಆದ್ದರಿಂದ ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದರು. ಸುದೀರ್ಘ ವಾದ ಆಲಿಸಿದ ಪೀಠ ವಿಚಾರಣೆಯನ್ನು ಬುಧವಾರ (ಏ.23)ಕ್ಕೆ ಮುಂದೂಡಿತು.
ಎಜಿ ವಾದದ ಸಾರಾಂಶ:
1976ರಿಂದ ಈವರೆಗಿನ ಸರ್ಕಾರಗಳು ಕಾಲಕ್ಕೆ ತಕ್ಕಂತೆ ಸುಮಾರು 15ಕ್ಕೂ ಹೆಚ್ಚು ನಿಗಮ ಮಂಡಳಿಗಳನ್ನು ರಚಿಸಿವೆ. ಬಹುತೇಕ ನಿಗಮ-ಮಂಡಳಿಗಳು 10-12 ವರ್ಷಗಳ ಹಿಂದೆಯೇ ಅಸ್ತಿತ್ವಕ್ಕೆ ಬಂದಿವೆ. ಜತೆಗೆ ಸಂಬಂಧಿಸಿದ ಜಾತಿ-ಸಮುದಾಯಗಳ ಏಳಿಗೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿವೆ. ಆದರೆ ಈವರೆಗೂ ಸುಮ್ಮನಿದ್ದ ಅರ್ಜಿದಾರರು ಇದೀಗ 2020ರಲ್ಲಿ ಆಕ್ಷೇಪ ಎತ್ತಿದ್ದಾರೆ.
ಅರ್ಜಿದಾರರು, ಸರ್ಕಾರ ಚುನಾವಣೆಗಳನ್ನು ಗೆಲ್ಲುವ ಉದ್ದೇಶದಿಂದ ಜಾತಿ ಹೆಸರಲ್ಲಿ ನಿಗಮ-ಮಂಡಳಿಗಳ ರಚನೆ ಮಾಡಿದೆ ಎಂದು ಆರೋಪಿಸಿದ್ದಾರೆ. ಆದರೆ, ಅರ್ಜಿದಾರರ ಆರೋಪದಲ್ಲಿ ಸತ್ಯಾಂಶವವಿಲ್ಲ. ಬಲಿಷ್ಠ ಮತ್ತು ಮುಂದುವರಿದ ಜಾತಿಗಳ ಹೆಸರಲ್ಲಿ ನಿಗಮಗಳನ್ನು ಸ್ಥಾಪಿಸಿದ್ದಾರೆ ಎಂದು ಹೇಳುವ ಮೂಲಕ ಜಾತಿಗಳ ನಡುವೆ ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾರೆ. ಜತೆಗೆ ಕೆಲವೇ ಆಯ್ದ ಜಾತಿಗಳ ಹೆಸರಿನ ನಿಗಮ-ಮಂಡಳಿಗಳ ಸ್ಥಾಪನೆಯನ್ನು ಮಾತ್ರ ಪ್ರಶ್ನಿಸಿದ್ದಾರೆ. ಇಂತರ ರಾಜಕೀಯ ಪ್ರೇರಿತ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಬಾರದು.
ಎಲ್ಲಾ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿ ಮೂಲಕ ಕಲ್ಯಾಣ ರಾಜ್ಯದ ಸ್ಥಾಪನೆ ಉದ್ದೇಶವನ್ನು ಸರ್ಕಾರ ಹೊಂದಿದೆ. ಅದಕ್ಕಾಗಿ ವಿವಿಧ ಜಾತಿ-ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಬಜೆಟ್ ನಲ್ಲಿ ಮೀಸಲಿಡುವ ಅನುದಾನವನ್ನು ಆಯಾ ವರ್ಗಗಳಿಗೆ ತಲುಪಿಸುವ ಸೇತುವೆಗಳಾಗಿ ನಿಗಮ-ಮಂಡಳಿಗಳನ್ನು ರಚಿಸಿದೆ ಎಂದು ವಾದ ಮಂಡಿಸಿದರು. ಹೆಚ್ಚಿನ ವಾದ ಮಂಡನೆಗೆ ಕಾಲಾವಕಾಶ ಬೇಕಿದ್ದರಿಂದ ವಿಚಾರಣೆ ಮುಂದೂಡಲಾಯಿತು.