ಬೆಂಗಳೂರು: ತನ್ನಿಂದಲೇ ಕುಟುಂಬಸ್ಥರಿಗೆ ಕೊರೊನಾ ಸೋಂಕು ಹಬ್ಬಿದೆ ಎಂದು ಮನನೊಂದು ವೃದ್ಧೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.
ಕುಣಿಗಲ್ ಮೂಲದ ವೃದ್ಧೆ ನಗರದ ರಾಜಗೋಪಾಲ ನಗರ ಠಾಣಾ ವ್ಯಾಪ್ತಿಯಲ್ಲಿ ಕುಟುಂಬಸ್ಥರೊಂದಿಗೆ ವಾಸವಿದ್ದರು. ಇದೇ ತಿಂಗಳ 18ರಂದು ವೃದ್ಧೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೃದ್ಧೆ ಆಸ್ಪತ್ರೆಗೆ ದಾಖಲಿಸಿದ ಕೆಲ ದಿನಗಳ ನಂತರ ಕುಟುಂಬಸ್ಥರ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಮಗಳು, ಅಳಿಯ ಹಾಗೂ ಮೊಮ್ಮಗನಿಗೆ ಕೂಡ ಸೋಂಕು ತಗುಲಿರುವುದು ದೃಢವಾಗಿತ್ತು.
ತನ್ನಿಂದಲೇ ಕುಟುಂಬಸ್ಥರಿಗೆ ಕೊರೊನಾ ಹಬ್ಬಿದೆ ಎಂಬ ಭಾವನೆಯಿಂದ ಮನನೊಂದ ವೃದ್ಧೆ ತಡರಾತ್ರಿ 2.30ಕ್ಕೆ ಕೋವಿಡ್ ವಾರ್ಡ್ನ ಬಾತ್ ರೂಂನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಚಾರ ತಿಳಿದು ಮಲ್ಲೇಶ್ವರಂ ಪೊಲೀಸರು ಹಾಗೂ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.