ಬೆಂಗಳೂರು : ಸಾರ್ವಜನಿಕ ಟ್ರಸ್ಟ್ ಬಿಲ್, ಭೂ ಸುಧಾರಣೆ ಕಾಯ್ದೆ ಸೇರಿದಂತೆ 7 ಹೊಸ ಬಿಲ್ಗಳು ಹಾಗೂ 2 ಸುಗ್ರೀವಾಜ್ಞೆಗಳನ್ನು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕಾನೂನು, ಸಂಸದೀಯ ಖಾತೆ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜೆ.ಸಿ. ಮಾಧುಸ್ವಾಮಿ, 2011ರಲ್ಲಿ ಬಿಜೆಪಿ ಸರ್ಕಾರ ಕರ್ನಾಟಕ ಸಾರ್ವಜನಿಕ ಟ್ರಸ್ಟ್ ಕಾಯ್ದೆಯನ್ನು ಜಾರಿಗೊಳಿಸುವ ಬಿಲ್ ಒಂದನ್ನು ವಿಧಾನಮಂಡಲದಲ್ಲಿ ಅಂಗೀಕರಿಸಿ, ರಾಜ್ಯಪಾಲರ ಅನುಮೋದನೆಗೆ ಕಳುಹಿಸಿತು. ಆದರೆ, ಆಡಳಿತ ಮತ್ತು ಪ್ರತಿಪಕ್ಷದ ತೀವ್ರ ವಿರೋಧದಿಂದಾಗಿ ಬಿಲ್ ಹಿಂಪಡೆಯಲಾಗಿತ್ತು. ಇದೀಗ ಮತ್ತೊಮ್ಮೆ ಟ್ರಸ್ಟ್ ಕಾಯ್ದೆಯನ್ನು ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ ಎಂದರು.
ಅಧಿವೇಶನದಲ್ಲಿ ಕರ್ನಾಟಕ ಸಾರ್ವಜನಿಕ ಟ್ರಸ್ಟ್ ಬಿಲ್, ಭೂ ಸುಧಾರಣೆ ಬಿಲ್ ಕಲಂ 109 ಕ್ಕೆ ತಿದ್ದುಪಡಿ ಸೇರಿದಂತೆ ಇತರೆ ಬಿಲ್ಗಳನ್ನು ಮಂಡಿಸಲಾಗುವುದು. ಟ್ರಸ್ಟ್ ಹೆಸರಲ್ಲಿ ಕಾರ್ಯನಿರ್ವಹಿಸುವ ಧಾರ್ಮಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕ ಕಾಯ್ದುಕೊಳ್ಳುವ ಸಂಬಂಧ ಕರ್ನಾಟಕ ಸಾರ್ವಜನಿಕ ಟ್ರಸ್ಟ್ ಕಾಯ್ದೆ ಮಂಡನೆ ಮಾಡಲು ನಿರ್ಧರಿಸಲಾಗಿದೆ ಎಂದರು.
ನ್ಯಾಷನಲ್ ಕಾನೂನು ಶಾಲೆಯಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇ. 25 ರಷ್ಟು ಪ್ರವೇಶಕ್ಕೆ ಮೀಸಲಾತಿ ನೀಡುವ ಸಂಬಂಧ ಮಸೂದೆಯನ್ನು ಮಂಡಿಸಲಾಗುವುದು. ಕಳೆದ ಕಾಂಗ್ರೆಸ್ ಸರ್ಕಾರವು ಶೇ. 50ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿತ್ತು. ಆದರೆ ಇದನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಹೀಗಾಗಿ ಶೇ.25 ರಷ್ಟು ಮೀಸಲಾತಿ ನೀಡಲಾಗುವುದು ಎಂದರು.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಶೈಕ್ಷಣಿಕ ಸಂಸ್ಥೆಯಲ್ಲಿ ಶೇ. 10 ರಷ್ಟು ಆರ್ಥಿಕ ದುರ್ಬಲ ಹೊಂದಿದವರಿಗೆ ಮೀಸಲಾತಿ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯದ ಶೈಕ್ಷಣಿಕ ಸಂಸ್ಥೆಯಲ್ಲಿಯೂ ಮೀಸಲಾತಿ ನೀಡುವ ಚಿಂತನೆ ಸರ್ಕಾರದ ಮುಂದಿದೆ ಎಂದರು.
ಎರಡು ಸುಗ್ರೀವಾಜ್ಞೆ ಸೇರಿದಂತೆ ಏಳು ಮಸೂದೆಗಳನ್ನು ಫೆ. 18 ರಂದು ಮಂಡಿಸಲು ನಿರ್ಧರಿಸಲಾಗಿದೆ. ಸದನದಲ್ಲಿ ಒಂದು ದಿನ ಸಂವಿಧಾನದ ಬಗ್ಗೆ ಚರ್ಚೆಗೆ ತೀರ್ಮಾನ ಮಾಡಲಾಗಿದೆ ಎಂದರು. ವಿಧಾನಮಂಡಲ ಜಂಟಿ ಅಧಿವೇಶನ ಫೆ.17 ರಂದು ಆರಂಭವಾಗಲಿದ್ದು, ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಫೆ.18 ರಂದು ಪ್ರಶ್ನೋತ್ತರ ಅವಧಿ ಇರುವುದಿಲ್ಲ. ಫೆ.21 ರವರೆಗೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆ ನಡೆಯಲಿದೆ. ಮಾರ್ಚ್ 3 ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಮಾರ್ಚ್ 5 ರಂದು ಬಜೆಟ್ ಮಂಡನೆಯಾಗಲಿದೆ ಎಂದು ಹೇಳಿದರು.