ಬೆಂಗಳೂರು: ಖಾಸಗಿ ಮತ್ತು ಕಾರ್ಪೋರೇಟ್ ಸಂಸ್ಥೆಗಳಿಗೆ ನಗರದ ಕೆರೆಗಳ ನಿರ್ವಹಣೆಯ ಜವಾಬ್ದಾರಿ ನೀಡಿ ಒಪ್ಪಂದ ಮಾಡಿಕೊಂಡಿರುವ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದೇ ವೇಳೆ ರಾಜ್ಯದ ಎಲ್ಲಾ ಕೆರೆಗಳನ್ನು ಸರ್ವೆ ಮಾಡಲು ತಿಂಗಳ ಒಳಗೆ ಜಿಲ್ಲಾಮಟ್ಟದಲ್ಲಿ ಕೆರೆ ಸಂರಕ್ಷಣಾ ಸಮಿತಿಗಳನ್ನು ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ನಗರದಲ್ಲಿರುವ ಕೆರೆಗಳ ಸಂರಕ್ಷಣೆ ಕೋರಿ ಸಿಟಿಜನ್ ಆ್ಯಕ್ಷನ್ ಫೋರಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಬಿಬಿಎಂಪಿ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ ಪಾಲಿಕೆ ವ್ಯಾಪ್ತಿಯಲ್ಲಿ 205 ಕೆರೆಗಳಿವೆ. ಅದರಲ್ಲಿ 160 ಕೆರೆಗಳ ಸರ್ವೆ ನಡೆಸಲಾಗಿದ್ದು, ಉಳಿದ 45 ಕೆರೆಗಳ ಸರ್ವೆ ಕಾರ್ಯ ಬಾಕಿ ಇದೆ. ಇನ್ನೂ 148 ಕೆರೆಗಳ ಜಾಗ ಒತ್ತುವರಿಯಾಗಿರುವುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ ಮುಂದಿನ ಎರಡು ತಿಂಗಳಲ್ಲಿ ಉಳಿದ 45 ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಳಿಸಬೇಕು. ಕೆರೆ ಜಾಗದಲ್ಲಿ ಮಾಡಿರುವ ಒತ್ತುವರಿ ಮತ್ತು ಬಫರ್ ಜೋನ್‌ನಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಲು ಸರ್ಕಾರ ಮತ್ತು ಬಿಬಿಎಂಪಿ ಜಂಟಿಯಾಗಿ ಕ್ರಮ ಜರುಗಿಸಬೇಕು ಎಂದು ನಿರ್ದೇಶಿಸಿತು. ಇದೇ ವೇಳೆ ನಗರದ ಕೆರೆಗಳ ಅಭಿವೃದ್ಧಿ ದೃಷ್ಟಿಯಿಂದ ಖಾಸಗಿ ಮತ್ತು ಕಾರ್ಪೋರೇಟ್ ಸಂಸ್ಥೆಗಳಿಗೆ ವಹಿಸಿ ಒಪ್ಪಂದ ಮಾಡಿಕೊಂಡಿರುವ ಸರ್ಕಾರದ ಕ್ರಮಕ್ಕೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಸರ್ಕಾರದ ಈ ಕ್ರಮವನ್ನು ಕೋರ್ಟ್ ಸಮ್ಮತಿಸುವುದಿಲ್ಲ. ಈ ಬಗ್ಗೆ ಮಾಡಿಕೊಂಡಿರುವ ಒಪ್ಪಂದದ ದಾಖಲೆಗಳನ್ನು ಮುಂದಿನ ವಿಚಾರಣೆ ವೇಳೆ ಕೋರ್ಟ್‌ಗೆ ಸಲ್ಲಿಸಿ. ಒಪ್ಪಂದದ ಕಾನೂನು ಸಿಂಧುತ್ವವನ್ನು ನ್ಯಾಯಾಲಯ ಪರಿಶೀಲಿಸಲಿದೆ. ಆದರೆ, ಕೆರೆಗಳ ಅಭಿವೃದ್ಧಿ ಹಾಗೂ ಪುನರುಜ್ಜೀವನಕ್ಕೆ ಕಾರ್ಪೋರೇಟ್ ಸಂಸ್ಥೆಗಳು ಹಣ ನೀಡುವುದಕ್ಕೆ ಈ ಆದೇಶ ಅಡ್ಡಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿತು. ಕೊನೆಯಲ್ಲಿ, ರಾಜ್ಯದ ಕೆರೆಗಳ ಸಂರಕ್ಷಣೆ ವಿಚಾರವಾಗಿ ಹೈಕೋರ್ಟ್ 2012ರ ಏ. 4ರಂದು ನೀಡಿದ್ದ ಆದೇಶವನ್ನು ಪ್ರಸ್ತಾಪಿಸಿದ ಪೀಠ ರಾಜ್ಯದ ಎಲ್ಲಾ ಕೆರೆಗಳ ಜಾಗದ ಸರ್ವೆ ಮಾಡಿಸಬೇಕು. ಅದಕ್ಕಾಗಿ ರಾಜ್ಯ ಮಟ್ಟದಲ್ಲಿ ಒಂದು ಉನ್ನತ ಸಮಿತಿಯನ್ನು ರಚಿಸಬೇಕು. ಇದಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಲು ಜಿಲ್ಲೆಗಳ ಹಂತದಲ್ಲಿ ಕೆರೆ ಸಂರಕ್ಷಣಾ ಸಮಿತಿ ರಚಿಸಬೇಕು. ಸಮಿತಿಗಳು ಕೆರೆಗಳ ಸರ್ವೇ ನಡೆಸಿ, ಗಡಿ ಗುರುತಿಸಬೇಕು ಹಾಗೂ ಬೇಲಿ ಅಳವಡಿಸಬೇಕು ಎಂದು ಸೂಚಿಸಿದೆ.
ಅದೇ ರೀತಿ ಕೆರೆ ಸುತ್ತಲಿನ 30 ಮೀಟರ್ ದೂರದೊರೆಗಿನ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಸೂಚಿಸಿ, ಅದರೊಳಗೆ ಬರುವ ಎಲ್ಲಾ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು. ಸಮಿತಿ ರಚನೆ ಮಾಡಿದ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ಈ ಕುರಿತಂತೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಪೀಠ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.