ಬೆಂಗಳೂರು: ಸೋನಿಯಾ ಗಾಂಧಿ ಅವರು ಮತ್ತೆ ಎಐಸಿಸಿ ಅಧ್ಯಕ್ಷೆಯಾಗಿ ಆಯ್ಕೆ ಆಗಿದ್ದಾರೆ. ಹಾಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಕಾವೇರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ನಿನ್ನೆಯ ಮೀಟಿಂಗ್ನಲ್ಲಿ ಸೋನಿಯಾ ಗಾಂಧಿ ಅವರ ಆಯ್ಕೆಯನ್ನು ಒಪ್ಪಿದ್ದಾರೆ. ನಾನು ಮಧ್ಯಾಹ್ನವರೆಗೂ ಅಲ್ಲೇ ಇದ್ದೆ. ಅಮೇಲೆ ಬಂದ್ಬಿಟ್ಟೆ, ಎಲ್ಲ ಆಮೇಲೆ ಮೀಟಿಂಗ್ ಮಾಡಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದರು.
ರಾತ್ರಿ 8ಕ್ಕೆ ಒಂದು ಮೀಟಿಂಗ್ ಇತ್ತು. ಆ ಮೀಟಿಂಗ್ನಲ್ಲಿ ಬಹುತೇಕರ ಅಭಿಪ್ರಾಯವನ್ನು ತೆಗೆದುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಆದ್ದರಿಂದ ನಾವು ಗಾಂಧಿ ಕುಟುಂಬ ಅಥವಾ ಬೇರೆ ಏನ್ ಮಾತನಾಡಬೇಕಿಲ್ಲ. ಇವಾಗ ಅಮಿತ್ ಶಾ ಅವರು ಮಿನಿಸ್ಟರ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದಾರೆ. ಇದು ಪ್ರಜಾಪ್ರಭುತ್ವನಾ ರಾಜಕೀಯದಲ್ಲಿ ಈ ರೀತಿಯಲ್ಲಿ ಆಗುತ್ತಿರುತ್ತದೆ ಎಂದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಒಂದು ಚುನಾವಣೆ ಆಗಬೇಕಿದೆ. ಸೋನಿಯಾ ಗಾಂಧಿಯವರೇ ಪೂರ್ಣಪ್ರಮಾಣದ ಅಧ್ಯಕ್ಷರಾಗುತ್ತಾರೆ. ಅದಾಗುವವರೆಗೂ ಅವರು ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ರಾಹುಲ್ ಗಾಂಧಿ ಅವರ ಮನವೊಲಿಸಲು ಸಾಕಷ್ಟು ಪ್ರಯತ್ನ ಮಾಡಿದ್ವಿ. ಆದ್ರೂ ಅವರು ಒಪ್ಪಲಿಲ್ಲ. ಇದರಿಂದಾಗಿ ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾರೆ. ನಾನು ಅವರನ್ನು ಅಭಿನಂದಿಸುತ್ತೇನೆ ಎಂದರು.
ಹೈಕಮಾಂಡ್ ನಿರ್ಧರಿಸಲಿದೆ:
ವಿಧಾನಸಭೆ ಪ್ರತಿಪಕ್ಷದ ನಾಯಕರ ಆಯ್ಕೆಯನ್ನು ಹೈಕಮಾಂಡ್ ಮಾಡಲಿದೆ. ಸದ್ಯ ನಾನು ಶಾಸಕಾಂಗ ಪಕ್ಷದ ನಾಯಕನಾಗಿದ್ದೇನೆ. ಕೆಪಿಸಿಸಿ ಅಧ್ಯಕ್ಷರು, ಹೈಕಮಾಂಡ್ ಜೊತೆ ಚರ್ಚಿಸಿ ಯಾರು ಮುಂದಿನ ಶಾಸಕಾಂಗ ಪಕ್ಷದ ನಾಯಕನಾಗಲ್ಲಿದ್ದಾರೆ ಎನ್ನುವುದನ್ನು ಸ್ಪೀಕರ್ಗೆ ತಿಳಿಸಲಿದ್ದಾರೆ. ಅದು ಯಾವಾಗ ಆಗಲಿದೆ ಎಂದು ಈಗಲೇ ಹೇಳಲಾಗದು. ನಾನು ಸದ್ಯ ಪ್ರತಿಪಕ್ಷದ ನಾಯಕನ ಸ್ಥಾನವನ್ನು ನಿಭಾಯಿಸುತ್ತಿದ್ದೇನೆ ಎಂದರು.