ಬೆಂಗಳೂರು: ಇಡೀ ರಾಜ್ಯದ ಆಶಾ ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸಲು ಸರ್ಕಾರ ಸಿದ್ಧವಿದೆ. ದಯಮಾಡಿ ಎಲ್ಲ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಹಿಂಪಡೆಯಬೇಕು ಎಂದು ಆರೋಗ್ಯ ಸಚಿವ ಬಿ. ಶ್ರೀ ರಾಮುಲು ಮನವಿ ಮಾಡಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತರ ಪ್ರತಿಭಟನೆ ಪೂರ್ವ ನಿಗದಿಯಾಗಿತ್ತು. ಹೀಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಮೂರು ದಿನಗಳ ಹಿಂದೆಯೇ ಸಭೆ ಮಾಡಲಾಗಿದೆ. ಆಶಾ ಕಾರ್ಯಕರ್ತರು 10 ಬೇಡಿಕೆ ಇಟ್ಟಿದ್ದಾರೆ. ಅದರಲ್ಲಿ ನಾವು ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿ 7 ಬೇಡಿಕೆ ಈಡೇರಿಸಿದ್ದೇವೆ. ಅವರ ಬೇಡಿಕೆಗೆ ನಾನು ಹಾಗು ನಮ್ಮ ಸರ್ಕಾರ ಸದಾ ಸ್ಪಂದಿಸಲು ಸಿದ್ಧವಿದೆ ಹಾಗಾಗಿ ಪ್ರತಿಭಟನೆ ಕೈಬಿಡಬೇಕು ಎಂದು ಮನವಿ ಮಾಡಿದರು.
ಆಯುಷ್ಮಾನ್ ಭಾರತ ಯೋಜನೆಯಡಿ ಬಿಪಿಎಲ್ ಕಾರ್ಡ್ ಬೇಡಿಕೆಯನ್ನು ಒಪ್ಪಿದ್ದೇವೆ. ಆಶಾ ಕಾರ್ಯಕರ್ತರಿಗೆ ಪೋರ್ಟಲ್ ನಲ್ಲಿ ಮಾಹಿತಿ ನೀಡಲು ಹೇಳಿದ್ದೇನೆ. ಎ. ಎನ್. ಎಂ ಗಳು ತಕ್ಷಣ ಮಾಹಿತಿ ನೀಡಲು ಸೂಚನೆ ನೀಡಿದ್ದೇನೆ. ಆಶಾ ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸಲು ವಾಟ್ಸ್ಆ್ಯಪ್ ಗ್ರೂಪ್ ಕೂಡ ಮಾಡಲಾಗಿದೆ ಎಂದು ಈಗಾಗಲೇ ನಡೆಸಿರುವ ಸಭೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಮೊದಲು ಆಶಾ ಕಾರ್ಯಕರ್ತೆಯರಿಗೆ 5,500 ರೂಪಾಯಿ ವೇತನ ನೀಡಲಾಗುತ್ತಿತ್ತು. ಯಡಿಯೂರಪ್ಪ ಸಿಎಂ ಆದ ನಂತರ 500 ರೂ. ಹೆಚ್ಚಿಸಿ 6 ಸಾವಿರ ರೂಪಾಯಿಗಳನ್ನು ಏಕಕಾಲಕ್ಕೆ ಸಂಬಳ ನೀಡಲು ಸೂಚನೆ ನೀಡಲಾಗಿದೆ. ಆದರೆ, ಅವರು 12 ಸಾವಿರ ಸಂಬಳ ನೀಡಲು ಕೇಳುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಸಂಬಳ ಹೆಚ್ಚಿದೆ ಎಂಬುದು ಅವರ ವಾದ. ಸರ್ಕಾರಕ್ಕೆ 1000 ರೂಪಾಯಿ ಸಂಬಳ ಹೆಚ್ಚಳ ಮಾಡಲು ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. ಅದಕ್ಕೆ ಸ್ವಲ್ಪ ಸಮಯ ಬೇಕು ನಿಮ್ಮ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ನಾವು ಬದ್ದರಾಗಿದ್ದೇವೆ ಎಂದು ಶ್ರೀರಾಮುಲು ಭರವಸೆ ನೀಡಿದ್ದಾರೆ.
ನಾನು ಎಷ್ಟು ದಿನ ಮಂತ್ರಿಯಾಗಿ ಇರುತ್ತೀನೋ ಗೊತ್ತಿಲ್ಲ. ಆದರೆ, ನಾನು ಮಂತ್ರಿಯಾಗಿರುವಾಗಲೇ ವೇತನವನ್ನು 10 ಸಾವಿರಕ್ಕೆ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಮಾತುಕತೆ ನಡೆಸುತ್ತೇನೆ. ಸಿಎಂ ನನ್ನನ್ನು ವಿಶ್ವಾಸಕ್ಕೆ ಪಡೆದು 10 ಸಾವಿರಕ್ಕೆ ವೇತನ ಹೆಚ್ಚಳ ಮಾಡುವ ವಿಶ್ವಾಸ ಇದೆ ಎಂದರು.