ಬೆಂಗಳೂರು: ಈ ಹಿಂದೆ ಮಹಾನಗರ ಪಾಲಿಕೆಯಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್- ಜೆಡಿಎಸ್ ಅವಧಿಯ ಕಾಮಗಾರಿಗಳನ್ನು ಒಂದೊಂದಾಗಿಯೇ ಎಸಿಬಿ ತನಿಖೆಗೆ ಸರ್ಕಾರ ವಹಿಸುತ್ತಿದೆ.
ಸ್ವಚ್ಛ ಭಾರತ್ ಅಭಿಯಾನದ ಕಾರ್ಯಕ್ರಮಗಳು ಹಾಗೂ ರಸ್ತೆಗುಂಡಿ ಮುಚ್ಚುವ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ನಗರ ವಕ್ತಾರ ಎನ್ ಆರ್ ರಮೇಶ್ ಆರೋಪಿಸಿದರು. 2015-16, 17-18 ಅವಧಿಯಲ್ಲಿ ರಸ್ತೆಗುಂಡಿ ಮುಚ್ಚಲು, 1,116 ಕೋಟಿ ರೂ. ಪಾಲಿಕೆ ವೆಚ್ಚ ಮಾಡಿತ್ತು. ಇನ್ನು ಸ್ವಚ್ಛ ಭಾರತ್ ಕಾರ್ಯಕ್ರಮದ ಅನುಷ್ಠಾನಕ್ಕೆ ಬಿಡುಗಡೆಯಾದ 108 ಕೋಟಿ ರೂ.ಯಲ್ಲಿ 92,27,37,050 ರೂಪಾಯಿಯಷ್ಟು ಅನ್ಯ ಉದ್ದೇಶಗಳಿಗೆ ಕಾನೂನು ಬಾಹಿರವಾಗಿ ಬಳಸಲಾಗಿದೆ ಎಂದು ಆರೋಪಿಸಲಾಗಿತ್ತು. ಇದನ್ನು ಈಗ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ಭ್ರಷ್ಟಾಚಾರ ನಿಗ್ರಹ ದಳದ ತನಿಖೆಗೆ ವಹಿಸಿದೆ.