ಬೆಂಗಳೂರು : ರಾಜ್ಯದಲ್ಲಿ ಶಾಲೆ ಆರಂಭ ಯಾವಾಗ ಅನ್ನೋ ಕೂತುಹಲ ಸದ್ಯ ಹಾಗೇ ಉಳಿದಿದೆ. ಇಂದು ಸಿಎಂ ಯಡಿಯೂರಪ್ಪನವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಅಂತಿಮ ನಿರ್ಧಾರ ಹೊರ ಬೀಳಲಿದೆ. ಈ ವಿಚಾರವಾಗಿ ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ನಿರ್ಧಾರವಾಗಿರಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಕಳೆದ ಸೆಪ್ಟೆಂಬರ್‌ವರೆಗೂ ಕೇಂದ್ರ ಸರ್ಕಾರ ಶಾಲಾ ತರಗತಿ ಆರಂಭ ಮಾಡಲು ಅನುಮತಿ ಕೊಟ್ಟಿರಲಿಲ್ಲ. ಬಳಿಕ ಶಾಲಾ ಆರಂಭದ ಬಗ್ಗೆ ಆಯಾ ರಾಜ್ಯಕ್ಕೆ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ನೀಡಿತ್ತು. ಈಗ ನಮ್ಮ ರಾಜ್ಯದ ತಾಂತ್ರಿಕ ಸಲಹಾ ಸಮಿತಿ ಪರಿಸ್ಥಿತಿ ಅವಲೋಕಿಸಿದೆ.
ಶಾಲೆಗಳ ಸ್ಥಿತಿ ಹಾಗೂ ಕೋವಿಡ್‌ನ ಸದ್ಯದ ಬೆಳವಣಿಗೆ ಬಗ್ಗೆ ಅಧ್ಯಯನ ಮಾಡಿ ವರದಿ ಕೊಟ್ಟಿದೆ. ಇಂದಿನ ಸಭೆಯಲ್ಲಿ ಮುಖ್ಯಮಂತ್ರಿಗಳು ವರದಿಯ ಆಧಾರದ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಸದ್ಯ ನಾನು ಹಾಗೂ ಆರೋಗ್ಯ ಸಚಿವರು ಸಿಎಂ ಅವರನ್ನು ಭೇಟಿ ಮಾಡಲಿದ್ದೇವೆ ಎಂದು ತಿಳಿಸಿದರು.
ವಿದ್ಯಾಗಮಕ್ಕೆ ಪೋಷಕರ ಅನುಮತಿ ಕಡ್ಡಾಯ : ವಿದ್ಯಾಗಮ ಯೋಜನೆ ಆರಂಭದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೂರುವರೆ ತಿಂಗಳು ಬಹಳ ಅಚ್ಚುಕಟ್ಟಾಗಿ ವಿದ್ಯಾಗಮ ನಡೆದಿತ್ತು. ಇಡೀ ರಾಜ್ಯದಲ್ಲಿ ಗ್ರಾಮೀಣ ಭಾಗದಲ್ಲಿ ಮಕ್ಕಳಿಗಾಗಿ ವಿದ್ಯಾಗಮ ಯೋಜನೆ ಜಾರಿಗೆ ತರಲಾಗಿದೆ. ಕೆಲ ಸಮ್ಯಸೆಗಳಿಂದ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿತ್ತು. ತಿಂಗಳ ಹಿಂದೆ ಹೈಕೋರ್ಟ್ 10 ದಿನದೊಳಗೆ ನಿಮ್ಮ ನಿಲುವು ತಿಳಿಸಿ ಅಂತಾ ಕೇಳಿತ್ತು.
ಇಡೀ ರಾಜ್ಯದ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಸೌಲಭ್ಯವಿಲ್ಲ. ಆದರೆ, ಹೈಕೋರ್ಟ್ ಅಪೇಕ್ಷೆಯ ಮೇರೆಗೆ ಮರು ಆರಂಭ ಮಾಡಲಾಗುತ್ತಿದೆ. ಪರಿಷ್ಕೃತವಾಗಿ ಬದಲಾವಣೆ ಮಾಡಿ ಮುನ್ನೆಚ್ಚರಿಕೆಯಿಂದ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.
ಈ ಹಿಂದೆ ಶಿಕ್ಷಕರು ಮರದ ಅಡಿಯಲ್ಲಿ, ವಠಾರದಲ್ಲಿ ಪಾಠ ಮಾಡುತ್ತಿದ್ದರು. ಆದರೆ, ಈ ಬಾರಿ ಶಾಲಾ ಆವರಣದಲ್ಲಿ ವಿದ್ಯಾಗಮ ನಡೆಯುತ್ತದೆ. ಪೋಷಕರ ಅನುಮತಿ ಪತ್ರ ಕಡ್ಡಾಯ ಮಾಡಲಾಗಿದ್ದು, ಯಾರಿಗೂ ಒತ್ತಡ ಇಲ್ಲ. ಯಾರಿಗೆ ಸೌಲಭ್ಯವಿಲ್ಲವೋ ಅವರು ವಿದ್ಯಾಗಮ ಯೋಜನೆಯ ಸದುಪಯೋಗ ಪಡೆಯಬಹುದು ಎಂದರು. ವಿದ್ಯಾಗಮ ಯಾರ ಸ್ವತ್ತಲ್ಲ. ಖಾಸಗಿ ಅನುದಾನರಹಿತ ಶಾಲೆಗಳು ಕೂಡ ವಿದ್ಯಾಗಮ ಮಾಡಬೇಕು ಎಂದು ಸಲಹೆ ನೀಡಿದರು.