ಬೆಂಗಳೂರು : ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅಫ್ರೋಜ್ ಬಿ ಎಂಬುವರನ್ನು ಜುಲೈ 13ರಂದು ವೈಟ್ ಫೀಲ್ಡ್ನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಆಕೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಬೇಕೆಂದಿದ್ದರು. ಈ ಸುದ್ದಿ ಕೇಳಿದಾಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲು ಬಂದಿದ್ದ ಆಕೆಯ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತಂದೆಯ ಅಂತ್ಯಕ್ರಿಯೆ ಮುಗಿಸಿಬಂದ ಪುತ್ರನಿಗೂ ಹೃದಯಾಘಾತವಾಗಿದೆ. 2 ದಿನದ ಬಳಿಕ ಆತನೂ ಸಾವನ್ನಪ್ಪಿದ್ದಾನೆ.
ಇತ್ತ ಆಸ್ಪತ್ರೆಯಲ್ಲಿದ್ದ ಮಹಿಳೆ ಕೊರೊನಾ ಸೋಂಕಿನಿಂದ ಉಸಿರಾಟ ಸಮಸ್ಯೆ ಉಂಟಾಗಿ ಮೃತರಾಗಿದ್ದಾರೆ. ಆಸ್ಪತ್ರೆಯವರು ಮೃತದೇಹ ನೀಡಲು ₹9 ಲಕ್ಷ ಪಾವತಿ ಮಾಡುವಂತೆ ಹೇಳಿದ್ದಾರೆ. ಆಸ್ಪತ್ರೆಯಿಂದ ಮೃತದೇಹ ಕೊಡಬೇಕಾದ್ರೆ ಬಿಲ್ ಪಾವತಿಗೆ ಒತ್ತಡ ಹಾಕಿದ್ದಾರೆ. ಬಿಬಿಎಂಪಿ ಅಧಿಕಾರಿಯವರು ಹೇಳಿದ್ರೂ ಮೃತದೇಹ ಕೊಡದೇ ಹಣಕ್ಕಾಗಿ ಪೀಡಿಸಿದ್ದಾರೆ.
ಮೃತದೇಹಕ್ಕಾಗಿ ಆಸ್ಪತ್ರೆ ಮುಂದೆ ನಿನ್ನೆಯಿಂದ ಕುಟುಂಬದವರು ಕಾಯುತ್ತಿದ್ದರು. ಕೊನೆಗೆ ಸಚಿವ ಬೈರತಿ ಬಸವರಾಜ್ ಅವರು ಖಾಸಗಿ ಆಸ್ಪತ್ರೆ ಭೇಟಿ ನೀಡಿದಾಗ ಅವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು. ನಂತರ ಸಚಿವರು ಶವವನ್ನು ನೀಡುವಂತೆ ಆಸ್ಪತ್ರೆ ಅಧಿಕಾರಿಗಳಿಗೆ ಸೂಚಿಸಿದ್ದು, ನಂತರ ಶವವನ್ನು ಕುಟುಂಬಸ್ಥರಿಗೆ ನೀಡಲಾಗಿದೆ.
ಮೃತ ಕುಟುಂಬದ ಸಂಬಂಧಿ ಸುಲ್ತಾನ್ ಮಿರ್ಜಾ ಅವರು ಮಾತನಾಡಿ, ಮೃತರ ಶವವನ್ನು ₹9 ಲಕ್ಷ ಬಿಲ್ ಪಾವತಿ ಮಾಡುವವರೆಗೆ ಕೊಡುವುದಿಲ್ಲ ಎಂದು, ಕಳೆದ 28 ಗಂಟೆ ಕಾಲ ಹಣಕ್ಕಾಗಿ ಪೀಡಿಸಿದ್ದಾರೆ. ಕೊನೆಗೆ ಸಚಿವ ಬೈರತಿ ಬಸವರಾಜ್ ಅವರ ಗಮನಕ್ಕೆ ತಂದಾಗ, ಆಸ್ಪತ್ರೆ ಅಧಿಕಾರಿಗಳಿಗೆ ಹೇಳಿ ಯಾವುದೇ ಬಿಲ್ ಪಾವತಿ ಮಾಡಿಸಿಕೊಳ್ಳದೆ ಶವ ನೀಡಿದ್ದಾರೆ ಎಂದು ಸಚಿವರ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದರು.