ಬೆಂಗಳೂರು: ಕೋವಿಡ್ 2ನೇ ಅಲೆಗೆ ನಿಯಂತ್ರಣ ಹೇರಿ ಜನರನ್ನು ಸಾವಿನ ದವಡೆಯಿಂದ ಪಾರು ಮಾಡಲು ನಾಳೆ ರಾತ್ರಿಯಿಂದ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ ಮಾಡಲಾಗುತ್ತಿರುವುದರಿಂದ ಸಾರ್ವಜನಿಕರು ಮತ್ತು ಸಾರಿಗೆ ವಲಯದಲ್ಲಿ ಕೆಲಸ ಮಾಡುವಂಥವರು ಸಹಕರಿಸಬೇಕೆಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.
ಕರ್ಫ್ಯೂ ವಿಧಿಸುವುದು ನಮ್ಮ ಸರ್ಕಾರಕ್ಕೆ ಸಂತಸದ ವಿಷಯವೇನಲ್ಲ. ಆದರೆ, ಈ ಸಂಕಷ್ಟದ ಸಂದರ್ಭದಲ್ಲಿ ಇದು ಅನಿವಾರ್ಯ ಕ್ರಮವಾಗಿದೆ. ಇಲ್ಲದಿದ್ದರೆ ಕೋವಿಡ್ ಕೈಮೀರಿ ಇಡೀ ಸಮುದಾಯಕ್ಕೇ ಅಪಾಯ ತಂದೊಡ್ಡಬಹುದು. ಆದ್ದರಿಂದ ಜಾರಿಗೆ ಬರಲಿರುವ ಕರ್ಫ್ಯೂ ಯಶಸ್ವಿಯಾಗಲು ವಾಹನಗಳ ಸಂಚಾರ ಮತ್ತು ಜನರ ಓಡಾಟಗಳನ್ನು ಪ್ರತಿಬಂಧಿಸಲಾಗಿದೆ.
ಇದನ್ನೂ ಓದಿ: ಮಲಗಿದ್ದಲ್ಲೇ ಹಾರಿಹೋಯ್ತು ಪ್ರಾಣ.. ಆರೈಕೆಗೆ ಯಾರೂ ಇಲ್ಲದೆ ಅನಾಥ ಶವವಾದ ಕೊರೊನಾ ಸೋಂಕಿತೆ
ಸರ್ಕಾರದ ಈ ಕಟ್ಟುನಿಟ್ಟಿನ ಕ್ರಮವನ್ನು ಉಲ್ಲಂಘಿಸಲು ಯಾರೂ ಮುಂದಾಗಬಾರದು. ಬಾಡಿಗೆ ಆಧಾರದ ಮೇಲೆ ವಾಹನ ಸೇವೆ ಸಲ್ಲಿಸುತ್ತಿರುವ ಖಾಸಗಿಯವರು ಈ ಸೂಕ್ಷ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸರ್ಕಾರದೊಂದಿಗೆ ಕೈ ಜೋಡಿಸಬೇಕು. ಒಂದು ವೇಳೆ ಪರಿಸ್ಥಿತಿಯನ್ನು ದುರ್ಲಾಭ ಮಾಡಿಕೊಂಡು ಹೆಚ್ಚಿನ ಹಣ ಸುಲಿಗೆಗೆ ಮುಂದಾಗಿ ಕಾನೂನು ಉಲ್ಲಂಘಿಸಿದರೆ ಅಂಥವರ ವಿರುದ್ಧ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸವದಿ ಎಚ್ಚರಿಕೆ ನೀಡಿದರು.
ನಮ್ಮ ಸರ್ಕಾರ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ವ್ಯಾಪಕವಾಗಿ ಉಚಿತ ಲಸಿಕೆ ವ್ಯವಸ್ಥೆಯನ್ನು ಕೈಗೊಳ್ಳುತ್ತಿದೆ. ಇದರ ಸೌಲಭ್ಯವನ್ನು ಪಡೆದುಕೊಂಡು ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಕೋವಿಡ್ ಪಿಡುಗನ್ನು ನಿರ್ಮೂಲನ ಮಾಡಲು ನಾವೆಲ್ಲರೂ ಒಂದಾಗಿ ಪ್ರಯತ್ನಿಸೋಣ ಎಂದು ಅವರು ತಿಳಿಸಿದರು.