ಬೆಂಗಳೂರು: ತಡರಾತ್ರಿ ಜೀವನ್ ಭೀಮಾ ನಗರ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವತಿ ಶವ ಪತ್ತೆಯಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಹೈದರಾಬಾದ್ ಮೂಲದ ಆಕಾಂಕ್ಷಾ (23) ಎಂಬುವವರ ಶವ ಪತ್ತೆಯಾಗಿದ್ದು, ಆಕೆಯ ಪ್ರಿಯಕರ ಅರ್ಪಿತ್ ಎಂಬಾತನ ಮೇಲೆ ಅನುಮಾನ ವ್ಯಕ್ತವಾಗಿದೆ.
ಆಕಾಂಕ್ಷಾ ಹಾಗೂ ಅರ್ಪಿತ್ ಇಬ್ಬರೂ ಸಹ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅರ್ಪಿತ್ ಕೆಲಸದಲ್ಲಿ ಪ್ರಮೋಷನ್ ಪಡೆದು ಹೈದರಾಬಾದಿಗೆ ತೆರಳಿದ್ದ. ಆಕಾಂಕ್ಷ ತನ್ನ ಸ್ನೇಹಿತೆಯೊಂದಿಗೆ ಜೀವನ್ ಭೀಮಾ ನಗರ ವ್ಯಾಪ್ತಿಯ ಕೋಡಿಹಳ್ಳಿಯಲ್ಲಿ ಖಾಸಗಿ ಅಪಾರ್ಟ್‌ಮೆಂಟಿನಲ್ಲಿ ವಾಸವಿದ್ದರು. ಅರ್ಪಿತ್ ಹೈದರಾಬಾದ್ನಿಂದ ಬಂದು ಆಗಾಗ ಅರ್ಪಿತಾಳನ್ನು ಭೇಟಿಯಾಗುತ್ತಿದ್ದ.
ಇಬ್ಬರ ಮಧ್ಯೆ ಆಗಾಗ ಜಗಳ ಕೂಡಾ ನಡೆಯುತ್ತಿದ್ದು ಬೇರೆಯಾಗಬೇಕು ಎಂದು ಗಲಾಟೆ ಮಾಡಿಕೊಂಡಿದ್ದರು ಎನ್ನಲಾಗಿದೆ. ತಡರಾತ್ರಿ ಆಕಾಂಕ್ಷಾ ವಾಸವಿದ್ದ ಮನೆಗೆ ಬಂದಿದ್ದ ಅರ್ಪಿತ್ ಆಕೆಯ ಉಸಿರುಗಟ್ಟಿಸಿ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕಾಂಕ್ಷಳ ರೂಮ್‌ಮೇಟ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಜೀವನ್ ಭೀಮಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನುಮಾನಸ್ಫದ ವ್ಯಕ್ತಿ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪೊಲೀಸರನ್ನ ಸಂಪರ್ಕಿಸಿ: ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿ, ಮೃತ ಯುವತಿಯ ಪ್ರಿಯಕರ ಅರ್ಪಿತ್ ಬಗ್ಗೆ ಯಾವುದೇ ಮಾಹಿತಿಗಳು ಸಿಕ್ಕರೆ ಅಥವಾ ಆತ ಯಾವುದೇ ಸ್ಥಳದಲ್ಲಿ ಕಂಡು ಬಂದರೆ ತಕ್ಷಣ ಈ ನಂಬರ್ಗೆ ಕರೆ ಮಾಡಿ- 7975879152 ಹಾಗೂ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಪ್ರೀತಿಸಿದ ಯುವತಿಯ ಕತ್ತು ಸೀಳಿ ತಾನು ಆತ್ಮಹತ್ಯೆ: ಇನ್ನು ನವದೆಹಲಿಯಲ್ಲಿ ತನ್ನನ್ನು ಪ್ರೀತಿಸಲಿಲ್ಲ ಎಂಬ ಕಾರಣಕ್ಕಾಗಿ ಪಾಗಲ್ ಪ್ರೇಮಿಯೊಬ್ಬ ಯುವತಿಯ ಕತ್ತು ಸೀಳಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ(2-06-2023) ನಡೆದಿತ್ತು. ಯುವತಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಪ್ರೀತಿಗಾಗಿ ಪೀಡಿಸುತ್ತಿದ್ದ ಯುವಕ ಆಕೆಯ ಕಚೇರಿಗೆ ಆಗಮಿಸಿದ್ದ.
ಈ ವೇಳೆ ತಗಾದೆ ತೆಗೆದು ಒತ್ತಾಯಿಸಿದ್ದ ಎನ್ನಲಾಗಿದೆ. ಯುವತಿ ಒಪ್ಪದಿದ್ದಾಗ ಚಾಕುವಿನಿಂದ ಕತ್ತು ಸೀಳಿದ್ದ. ಅಲ್ಲಿದ್ದ ಸಿಬ್ಬಂದಿ ಆತನನ್ನು ಹಿಡಿದಾಗ, ಯುವತಿ ತಪ್ಪಿಸಿಕೊಂಡಿದ್ದಳು. ಬಳಿಕ ಯುವಕ ಕೋಣೆಯೊಂದರಲ್ಲಿ ಹೋಗಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿಯಲ್ಲಿ ಸಹೋದರಿಯಿಬ್ಬರು ಆತ್ಮಹತ್ಯೆ: ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಜೂನ್ 4 ರಂದು, ಮನೆಯಲ್ಲಿ ತಾಯಿ ಇಲ್ಲದ ವೇಳೆ ಇಬ್ಬರೂ ಸಹೋದರಿಯರು ನೇಣಿಗೆ ಶರಣಾಗಿದ್ದ ಬಗ್ಗೆ ವರದಿಯಾಗಿತ್ತು. ಸಹೋದರಿಯರ ಸಾವಿಗೆ ನಿಖರ ಕಾರಣ ಏನೆಂದು ಇನ್ನೂ ತಿಳಿದು ಬಂದಿರಲಿಲ್ಲ. ಸದ್ಯ ಈ ಘಟನೆ ಬಗ್ಗೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬಾರ್ ಕ್ಯಾಷಿಯರ್ ಕೊಲೆ ಪ್ರಕರಣ: ಓರ್ವನ ಕಾಲಿಗೆ ಗುಂಡೇಟು, ಇಬ್ಬರ ಬಂಧನ