ಬೆಂಗಳೂರು: ವಿಜಯನಗರದ ಜನತಾ ಕೋ-ಆಪರೇಟಿವ್ ಬ್ಯಾಂಕ್ನಲ್ಲಿ ಯಾವುದೇ ಬೇನಾಮಿ ವ್ಯಕ್ತಿಗಳಿಗೆ ಸಾಲ ನೀಡಿಲ್ಲ ಹಾಗೂ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಬ್ಯಾಂಕ್ನ ನಿರ್ದೇಶಕ ಮಂಡಳಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಸ್ಪಷ್ಟಪಡಿಸಿದೆ.
ಶುಕ್ರವಾರವಷ್ಟೇ ಬೆಂಗಳೂರು ನಗರದ 24 ನೇ ಹೆಚ್ಚುವರಿ ಮುಖ್ಯ ಮಹಾನಗರ ಮ್ಯಾಜಿಸ್ಟ್ರೇಟ್ ಕೋರ್ಟ್ ಬ್ಯಾಂಕ್ನಲ್ಲಿ ಅವ್ಯವಹಾರ ನಡೆದಿರುವ ಆರೋಪದಡಿ ದಾಖಲಿಸಿರುವ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಲು ವಿಜಯನಗರ ಠಾಣೆ ಪೊಲೀಸರಿಗೆ ಆದೇಶಿಸಿತ್ತು. ಬ್ಯಾಂಕ್ನ ನಿರ್ದೇಶಕ ಮಂಡಳಿ ಸದಸ್ಯ ಕುಮಾರ್ ಆರ್ ದಾಖಲಿಸಿದ್ದ ದೂರಿನ ಮೇರೆಗೆ ಈ ಆದೇಶ ನೀಡಿತ್ತು.
ಕೋರ್ಟ್ ಆದೇಶದಿಂದ ಬ್ಯಾಂಕ್ನ ಠೇವಣಿದಾರರು ಕಂಗಾಲಾಗಬಾರದು ಹಾಗೂ ಬ್ಯಾಂಕ್ ಸುಸ್ಥಿರ ಅಭಿವೃದ್ಧಿಯಲ್ಲಿದೆ ಎಂದು ತಿಳಿಸಲು, ಆಡಳಿತ ಮಂಡಳಿ ಪತ್ರಿಕಾಗೋಷ್ಠಿ ನಡೆಸಿತು. ಈ ವೇಳೆ ಬ್ಯಾಂಕ್ ನಿರ್ದೇಶಕ ಮಂಡಳಿ ಪರವಾಗಿ ಅಧ್ಯಕ್ಷ ರಾಮು ಸಿ. ಸ್ಪಷ್ಟನೆ ನೀಡಿ, ಬ್ಯಾಂಕ್ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ದೂರುದಾರ ಕುಮಾರ್ ತಮ್ಮ ವೈಯಕ್ತಿಕ ಹಿತಾಸಕ್ತಿ ರಕ್ಷಣೆಗಾಗಿ ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ. ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಠೇವಣಿದಾರರು ಆತಂಕ ಪಡುವ ಅಗತ್ಯ ಇಲ್ಲ ಎಂದರು.
ಹಾಗೆಯೇ, ಕೋರ್ಟ್ನಲ್ಲಿ ಪಿಸಿಆರ್ ದಾಖಲಿಸಿರುವ ದೂರುದಾರ ಕುಮಾರ್ ಆರ್ ಅವರು ವಿ ಎನ್ ಕನ್ ಸ್ಟ್ರಕ್ಷನ್ ಸಂಸ್ಥೆಗೆ ಸಾಲ ಕೊಡಿಸಲು ಜಾಮೀನು ನೀಡಿದ್ದಾರೆ. ಈ ಸಂಸ್ಥೆ ಪಡೆದಿರುವ ಸಾಲ ಸಕಾಲದಲ್ಲಿ ಹಿಂದಿರುಗಿಸದೇ ಸುಸ್ತಿದಾರ ಆಗಿದೆ. ಹೀಗಾಗಿ ಸಂಸ್ಥೆಯು ಸಾಲ ಪಡೆಯಲು ಜಾಮೀನು ನೀಡಿರುವ ಕುಮಾರ್ ಅವರಿಗೆ ಸೇರಿರುವ ನಾಗರಭಾವಿಯ ಫ್ಲ್ಯಾಟ್ ಜಪ್ತಿಗೆ ಕ್ರಮ ಕೈಗೊಳ್ಳಲು ಬ್ಯಾಂಕ್ ಮುಂದಾಗಿದೆ. ಈ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಕುಮಾರ್ ಬ್ಯಾಂಕ್ ನಿರ್ದೇಶಕ ಮಂಡಳಿ ವಿರುದ್ಧ ಇಲ್ಲದ ಆರೋಪ ಮಾಡುತ್ತಾ ಕೋರ್ಟ್ ಮೆಟ್ಟಿಲೇರಿದ್ದಾರೆ. ಪೊಲೀಸರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿ. ನಾವು ತಪ್ಪು ಮಾಡಿದ್ದರೆ ಅದರ ಪರಿಣಾಮ ಎದುರಿಸುತ್ತೇವೆ.
ಬ್ಯಾಂಕ್ ಅಥವಾ ನಿರ್ದೇಶಕ ಮಂಡಳಿ ಯಾವುದೇ ಅಪರಾಧ ಎಸಗಿಲ್ಲ. ಅಥವಾ ಯಾವುದೇ ಬೇನಾಮಿ ವ್ಯಕ್ತಿಗಳಿಗೆ ಸಾಲ ನೀಡಿಲ್ಲ. ಸ್ಥಿರಾಸ್ತಿ ಆಧಾರದ ಮೇಲೆ ಕೆಲವೊಂದು ಸಂಸ್ಥೆಗಳು ಸಾಲ ಪಡೆದು ನಂತರ ಸುಸ್ತಿದಾರರಾಗಿವೆ. ಅಂತಹ ಸಂಸ್ಥೆಗಳಿಂದ ಸಾಲ ವಸೂಲಿ ಮಾಡಲು ಎಲ್ಲ ಕಾನೂನು ಕ್ರಮ ಜರುಗಿಸಲು ಬ್ಯಾಂಕ್ ಸಿದ್ದವಿದೆ ಎಂದು ಬ್ಯಾಂಕ್ ಅಧ್ಯಕ್ಷ ರಾಮು ಸಿ ಅವರು ಸ್ಪಷ್ಟನೆ ನೀಡಿದರು.