ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯವರು ಅಘೋಷಿತ ತುರ್ತು ಪರಿಸ್ಥಿತಿ ಜಾರಿಗೆ ತಂದಿದ್ದು, ಇದು ಇತಿಹಾಸದಲ್ಲೇ ಮೊದಲು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ರಾಜ್ಯಾದ್ಯಂತ 144ನೇ ಸೆಕ್ಷನ್ ಜಾರಿಗೆ ತರಲಾಗಿದ್ದು, ರಾಜ್ಯ ಸರ್ಕಾರ ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಳಿಸಿದೆ. ಪೌರತ್ವ ಕಾಯ್ದೆ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಇದಕ್ಕೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ ಎಂದರು.
ಮಹದಾಯಿ ನಾಲಾ ಯೋಜನೆಗೆ ಕೇಂದ್ರದ ತಡೆ ವಿಚಾರ ಕುರಿತು ಮಾತನಾಡಿ, 24 ಗಂಟೆಯೊಳಗೆ ಸಮಸ್ಯೆ ಬಗೆಹರಿಸುತ್ತೇವೆ ಅಂದಿದ್ರಿ. ಸದ್ಯ ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಬಿಜೆಪಿ ಸರ್ಕಾರವಿದೆ. ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಈಗ ಅದನ್ನ ಕೇಂದ್ರವೇ ತಡೆ ಹಿಡಿದಿದೆ. ಸರ್ಕಾರವೇ ಕ್ಲಿಯರೆನ್ಸ್ ಕೊಟ್ಟು, ಅದನ್ನು ಸರ್ಕಾರವೇ ತಡೆಯೋದು ಏಕೆ? 24 ಗಂಟೆಯೊಳಗೆ ಸಮಸ್ಯೆ ಬಗೆಹರಿಸಿದ್ರಾ, ಆ ಭಾಗದ ಜನರಿಗೆ ಕುಡಿಯುವ ನೀರು ಕೊಟ್ರಾ ಎಂದು ಪ್ರಶ್ನಿಸಿದರು.
ರಾಮಚಂದ್ರ ಗುಹಾ ನೇತೃತ್ವದಲ್ಲಿ ಟೌನ್ ಹಾಲ್ ಮುಂದೆ ನಡೆಸಿದ ಧರಣಿಗೆ ಸರ್ಕಾರ ಅಡ್ಡಿಪಡಿಸಿದೆ. ಜೊತೆಗೆ ಕಾಂಗ್ರೆಸ್ ನಾಯಕರಿಗೆ ಸಿಎಂ ಧಮ್ಕಿ ಹಾಕಿದ್ದಾರೆ. ಅಧಿಕಾರ ಶಾಶ್ವತವಲ್ಲ, ಇದು ನಿಮ್ಮ ಗಮನಕ್ಕಿರಲಿ ಎಂದು ಸಿಎಂಗೆ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಎಂಎಲ್ಸಿ ಅಬ್ದುಲ್ ಜಬ್ಬಾರ್ ಹಾಗೂ ಮಾಜಿ ಮೇಯರ್ ರಾಮಚಂದ್ರಪ್ಪ ಉಪಸ್ಥಿತರಿದ್ದರು.