ಬೆಂಗಳೂರು : ಬಿಲ್ ಕೇಳಿದರೆ ಆಸ್ಪತ್ರೆ ಉಡಾಯಿಸುವುದಾಗಿ ಬೆದರಿಸಿ ವೈದ್ಯರ ಅನುಮತಿ ಇಲ್ಲದೇ ಗುಣಮುಖರಾಗಿದ್ದ ರೋಗಿಯನ್ನು ಕರೆದುಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸು ದಾಖಲಿಸಿಕೊಂಡಿದ್ದ ಕಾಡುಗೊಂಡನಹಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ವೆಂಕಟೇಶ್ ಪುರ ನಿವಾಸಿಯಾದ ನವಾಜ್, ಹುಸೇನ್, ಸೈಯ್ಯದ್ ಅಬ್ಬಾಸ್ ಹಾಗೂ ಸಗೀರ್ ಪಾಷ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಆಸ್ಗರ್ ಅವರನ್ನು ಮಗ ಸಯ್ಯದ್ ಶರೀಫ್ ಕಳೆದ ತಿಂಗಳು ಮೇ 18ರಂದು ಕೆ.ಜಿ.ಹಳ್ಳಿ ಠಾಣೆ ಮುಂಭಾಗ ರಫೀ ಆಸ್ಪತ್ರೆಗೆ ದಾಖಲಿಸಿದ್ದ. ತಪಾಸಣೆ ನಡೆಸಿದ ವೈದ್ಯರು ಶ್ವಾಸಕೋಶದಲ್ಲಿ ನೀರಿನಾಂಶವಿದ್ದು ಹೊರತೆಗೆಯಬೇಕಾಗಿದೆ. ಇದಕ್ಕೆ ಚಿಕಿತ್ಸಾ ವೆಚ್ಚ ಹೆಚ್ಚಾಗಲಿದೆ ಎಂದು ಹೇಳಿದ್ದರು.
ಸಯ್ಯದ್ ಸಮ್ಮತಿ ಮೇರೆಗೆ ಕಳೆದ 15 ದಿನಗಳ ಕಾಲ ಆಸ್ಗರ್ ಅವರಿಗೆ ಚಿಕಿತ್ಸೆ ನೀಡಿದ ಪರಿಣಾಮ ಗುಣಮುಖರಾಗಿದ್ದರು. ಚಿಕಿತ್ಸಾ ವೆಚ್ಚ 2.09 ಲಕ್ಷ ರೂಪಾಯಿವಾಗಿತ್ತು. ಸಯ್ಯದ್ ಮುಂಗಡವಾಗಿ 41 ಸಾವಿರ ರೂಪಾಯಿ ಪಾವತಿಸಿ ಉಳಿದ 1.78 ಲಕ್ಷ ರೂಪಾಯಿ ಭರಿಸಲು ನಿರಾಕರಿಸಿದ್ದ ಎಂದು ತಿಳಿದುಬಂದಿದೆ.
ಅನಗತ್ಯವಾಗಿ ಬಿಲ್ ಏರಿಸಿದ ಆರೋಪ : ಚಿಕಿತ್ಸೆ ನೀಡುವ ನೆಪದಲ್ಲಿ ಅನಗತ್ಯವಾಗಿ 2 ಲಕ್ಷ ರೂಪಾಯಿ ಬಿಲ್ ಮಾಡಿದ್ದಾರೆ. ಸಣ್ಣ-ಪುಟ್ಟ ಚಿಕಿತ್ಸೆ ನೀಡಿ ಲಕ್ಷಾಂತರ ರೂಪಾಯಿ ಬಿಲ್ ಮಾಡಿದ್ದಾರೆ ಎಂದು ಆಸ್ಪತ್ರೆಯಲ್ಲಿ ಸಯ್ಯದ್ ದೂರಿದ್ದು,ಆಸ್ಪತ್ರೆಯ ಹೊರಗೆಬಂದು ಕೂಗಾಟ ನಡೆಸಿದ್ದ.
ಈ ವೇಳೆ ರೋಗಿ ಅಳಿಯ ನವಾಜ್, ಸಂಬಂಧಿಕ ಸಗೀರ್ ಪಾಷಾ ಈತನಿಗೆ ಸಾಥ್ ನೀಡಿದ್ದರು. ಅದೇ ದಿನ ರಾತ್ರಿ ಸುಮಾರು 8 ಜನರು ಆಸ್ಪತ್ರೆಗೆ ನುಗ್ಗಿದ್ದಾರೆ. ಅಲ್ಲೇ ಇದ್ದ ಅರೆ ವೈದ್ಯಕೀಯ ಸಿಬ್ಬಂದಿಯನ್ನು ಬೆದರಿಸಿ, ವೈದ್ಯರ ಅನುಮತಿ ಇಲ್ಲದೇ ರೋಗಿಯನ್ನು ಕೊಂಡೊಯ್ದಿದ್ದಾರೆ.
ಈ ಸಂದರ್ಭ ಆಸ್ಪತ್ರೆಯ ಸಿಬ್ಬಂದಿಗಳು ಬಿಲ್ ಪಾವತಿಸುವಂತೆ ಹೇಳಿದ್ದು, ಬಿಲ್ ಕೇಳಿದರೆ ಆಸ್ಪತ್ರೆಯನ್ನು ಉಡಾಯಿಸುತ್ತೇವೆ ಎಂದು ಹೆದರಿಸಿದ್ದಾರೆ. ತಡೆಯಲು ಬಂದ ಸೆಕ್ಯೂರಿಟಿ ಗಾರ್ಡ್ ಮೇಲೆ ಕೈ ಮಾಡಿ ರೋಗಿಯನ್ನು ಕರೆದುಕೊಂಡು ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ.
ಈ ಸಂಬಂಧ ಆಸ್ಪತ್ರೆ ಮಾಲೀಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಇನ್ಸ್ಪೆಕ್ಟರ್ ರೋಹಿತ್ ನೇತೃತ್ವದ ತಂಡ ಸೆರೆಯಾಗಿದ್ದ ಆಸ್ಪತ್ರೆಯ ಸಿಸಿಟಿವಿ ಆಧರಿಸಿ ನಾಲ್ವರನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ಇನ್ನೂ ನಾಲ್ಕು ಮಂದಿ ಭಾಗಿಯಾಗಿದ್ದು, ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ : ಪ್ರೀತಿಸಿ ಮದುವೆಯಾಗಿ ವರ್ಷದ ಬಳಿಕ ಮನೆಗೆ ಬಂದ ಜೋಡಿ: ಸಿಕ್ಕಸಿಕ್ಕವರನ್ನು ಥಳಿಸಿದ ಯುವತಿ ಪೋಷಕರು