ಬೆಂಗಳೂರು: ಕಳೆದ ಹದಿನೈದು ದಿನಗಳಿಂದ ರಾಜಕೀಯ ಜಂಜಾಟದಲ್ಲಿ ಹೈರಾಣಾಗಿರುವ ಮೂರು ಪಕ್ಷಗಳ ಶಾಸಕರು, ಅದರಲ್ಲೂ ಕಳೆದ ಹನ್ನೆರಡು ದಿನಗಳಿಂದಲೂ ಒಂದೇ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಜೆಡಿಎಸ್ ಶಾಸಕರು ಪ್ರಸ್ತುತ ಯಾವುದೇ ವಿಷಯಗಳಿಗೆ ತಲೆಕೆಡಿಸಿಕೊಳ್ಳದೇ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.
ಯೆಸ್, ಒಂದು ಕಡೆ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅತೃಪ್ತ ಶಾಸಕರನ್ನು ಹೇಗೆ ಕರೆ ತರುವುದು ಅನ್ನೋ ಚಿಂತೆಯ ಜೊತೆಯಲ್ಲಿ ಮತ್ತಷ್ಟು ಶಾಸಕರು ಶಾಸಕ ಸ್ಥಾನಕ್ಕೆ ಎಲ್ಲಿ ರಾಜೀನಾಮೆ ನೀಡುತ್ತಾರೆ ಅನ್ನೋ ಆತಂಕದಲ್ಲಿದ್ದಾರೆ. ಮತ್ತೊಂದು ಕಡೆ ಇದೇ ಬಿಜೆಪಿಗೂ ಶಾಸಕರು ಎಲ್ಲಿ ಪಕ್ಷ ಬಿಟ್ಟು ಹೋಗುತ್ತಾರೆ ಅನ್ನೋ ಆತಂಕದ ಜೊತೆಯಲ್ಲಿ ಮೈತ್ರಿ ಸರ್ಕಾರವನ್ನು ಬೀಳಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಹೋರಾಟ ನಡೆಸುತ್ತಿದೆ. ಇದರ ನಡುವೆ ಹೈರಾಣಾಗಿರುವ ಮೂರು ಪಕ್ಷದ ಶಾಸಕರು ಇದೆಲ್ಲಾ ಯಾವಾಗ ಮುಗಿಯುತ್ತದೆ ಎನ್ನುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ಸರ್ಕಾರ ಉಳಿಸಿಕೊಳ್ಳಲು ವಿಶ್ವಾಸಮತಯಾಚನೆಯ ಕುರಿತು ವಿಧಾನಸೌಧದಲ್ಲಿ ಚರ್ಚೆ ನಡೆಸುತ್ತಿರುವ ಮೈತ್ರಿ ಸರ್ಕಾರದ ಪರವಾಗಿ ಬಹುತೇಕ ಸಚಿವರು ಸೇರಿದಂತೆ ಶಾಸಕರು ತಮ್ಮ ಅಭಿಪ್ರಾಯವನ್ನು ಮಂಡನೆ ಮಾಡಿದ್ದಾರೆ. ಬೆಳಗ್ಗೆ ಹನ್ನೊಂದು ಗಂಟೆಗೆ ಹೋದ ಅವರು ರಾತ್ರಿ ಎಂಟು ಒಂಬತ್ತು ಗಂಟೆಯಾದ್ರೂ ವಿಧಾನಸೌಧದಲ್ಲೇ ಇರುತ್ತಿದ್ದರು. ಇದೀಗ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಬಿಡುವು ಸಿಕ್ಕಿದ್ದು ಎಲ್ಲಾ ಶಾಸಕರಂತೆ ಜೆಡಿಎಸ್ ಶಾಸಕರು ರಿಲ್ಯಾಕ್ಸ್ ಮೂಡ್ಗೆ ತೆರಳಿದ್ದಾರೆ.
ಬೆಳಗ್ಗೆ ಸಚಿವ ಬಂಡೆಪ್ಪ ಕಾಶೆಂಪೂರ್ ದೇವಸ್ಥಾನಕ್ಕೆ ಹೋಗಿ ಬಂದಿದ್ದು ಬಿಟ್ಟರೆ ಬೇರೆ ಯಾವ ಶಾಸಕರೂ ದೇವನಹಳ್ಳಿ ಬಳಿ ಇರುವ ಪ್ರೇಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್ನಿಂದ ಹೊರ ಬರಲಿಲ್ಲ.. ಅದೇ ರೀತಿ ಒಳಗೆ ಎಲ್ಲರೂ ವಿಶ್ರಾಂತಿ ಪಡೆಯುತ್ತಿದ್ದು, ಯಾರೂ ಕೂಡ ಪೋನ್ಗಳನ್ನು ರಿಸೀವ್ ಮಾಡದೇ ರಿಲ್ಯಾಕ್ಸ್ ಆಗುತ್ತಿದ್ದಾರೆ. ಬೆಳಗ್ಗೆ ಎಂದಿನಂತೆ ಜಾಗಿಂಗ್ ಮುಗಿಸಿ, ತಿಂಡಿ, ಊಟ ಮತ್ತೇ ಡಿನ್ನರ್ ಎಲ್ಲ ರೆಸಾರ್ಟ್ನಲ್ಲೇ ಮುಗಿಸಿ ರೂಮ್ಗಳಲ್ಲೇ ವಿಶ್ರಾಂತಿಗೆ ಜಾರಿದ್ದಾರೆ ಎನ್ನಲಾಗುತ್ತಿದೆ.
ಸೋಮವಾರ ತನಕ ರೆಸಾರ್ಟ್ನಲ್ಲೇ ವಾಸ್ತವ್ಯ ಹೂಡಲಿರುವ ಜೆಡಿಎಸ್ ಶಾಸಕರು ಸೋಮವಾರದ ಬೆಳವಣಿಗೆ ಬಳಿಕ ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಲಿದ್ದಾರೆ ಎನ್ನಲಾಗಿದ್ದು, ಸಿಎಂ ಕುಮಾರಸ್ವಾಮಿ ಪ್ರತಿದಿನ ರೆಸಾರ್ಟ್ಗೆ ಬಂದು ಶಾಸಕರಿಗೆ ಧೈರ್ಯ ತುಂಬುತ್ತಿದ್ದಾರೆ. ಇದರಿಂದ ಶಾಸಕರು ಯಾವುದೇ ಟೆನ್ಷೆನ್ಗೆ ಒಳಗಾಗದೇ ಆರಾಮವಾಗಿ ರೆಸಾರ್ಟ್ ನಲ್ಲಿ ಕಾಲಕಳೆಯುತ್ತಿದ್ದಾರೆ.