ಬೆಂಗಳೂರು: ಇಲ್ಲಿನ ಗ್ರಾಂಡ್ ತೊರ್‍ಟಾನ್ ಕಂಪೆನಿ, ಬಿ.ಪ್ಯಾಕ್ ಹಾಗೂ ಲೆಟ್ಸ್ ಎಂಡೋಸ್ ಸಂಸ್ಥೆಯು ಬಿ.ಬಿ.ಎಂ.ಪಿ.ಯ ಸಹಯೋಗದೊಂದಿಗೆ ಪ್ರಾಜೆಕ್ಟ್ ಕಲ್ಪತರು ಎಂಬ ಟ್ಯಾಗ್ ಲೈನ್ ಅಡಿಯಲ್ಲಿ ಬಾಗಮನೆ ಟೆಕ್ ಪಾರ್ಕ್‍ನಲ್ಲಿರುವ ಬೈರಸಂದ್ರ ಕೆಳಗಿನ ಕೆರೆಯಲ್ಲಿ ಗಿಡನೆಡುವ ಕಾರ್ಯಕ್ರಮ ನಡೆಯಿತು.
ಗ್ರಾಂಡ್ ತೊರ್‍ಟಾನ್ ಕಂಪನಿಯ 60ಕ್ಕೂ ಹೆಚ್ಚು ಉದ್ಯೋಗಿಗಳು ಗಿಡನೆಡುವ ಕಾರ್ಯದಲ್ಲಿ ಪಾಲ್ಗೊಂಡು ಸುಮಾರು 120ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟರು. ಇಲ್ಲಿ ನೆಟ್ಟಂತಹ ಸಸಿಗಳನ್ನು ಪೋಷಿಸುವ ಜವಾಬ್ದಾರಿಯನ್ನು ಇದೇ ಕಂಪನಿಯು ವಹಿಸಿಕೊಂಡಿದೆ.
ಮುಂದಿನ ಪೀಳಿಗೆಗೆ ನೀರನ್ನು ಉಳಿಸಬೇಕಾಗಿದೆ. ಹೀಗಾಗಿ, ಮರಗಳನ್ನು ನೆಟ್ಟು ಅದನ್ನು ಪೋಷಿಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರದ್ದು. ಕೆರೆಗಳನ್ನು ಉಳಿಸಿ ಅವುಗಳನ್ನು ಪುನರುಜ್ಜೀವನ ಗೊಳಿಸಬೇಕಾಗಿದೆ ಎಂದು ಹೊಸ ತಿಪ್ಪಸಂದ್ರ ವಾರ್ಡಿನ ಕಾರ್ಪೋರೇಟರ್ ಶಿಲ್ಪ ಅಭಿಲಾಷ್ ಈ ಸಂದರ್ಭದಲ್ಲಿ ಹೇಳಿದರು.
ಐಟಿ ಜಗತ್ತಿನಲ್ಲಿ ಪರಿಸರ ಕಾಳಜಿ ಹೊಂದಿರುವ ಈ ಯುವಸಮೂಹ ಗಿಡನೆಡುವುದಲ್ಲದೇ ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನೂ ಕೂಡ ಹೊಂದಿದೆ. ಈ ಕೆಲಸ ಇಂದು ಪ್ರತಿಯೊಬ್ಬ ನಾಗರೀಕರಿಂದಲೂ ಆಗಬೇಕಾಗಿದೆ.
ಗ್ರಾಂಡ್ ತೊರ್‍ಟಾನ್ ಕಂಪನಿಯ ಮ್ಯಾನೇಜರ್ ವರ್‍ನೇ ಬಾಗ್ ಹಾಗೂ ಬಿ.ಪ್ಯಾಕ್ ಸಂಸ್ಥೆಯ ಪ್ರತಿನಿಧಿ ಹರ್ಷಿತ ವಿ ಉಪಸ್ಥಿತರಿದ್ದರು.