ಬೆಂಗಳೂರು: ಕೌಟುಂಬಿಕ ಕಾರಣಕ್ಕಾಗಿ ಮನನೊಂದು ಟೆಕ್ಕಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಮೂರ್ತಿ ನಗರದ ಬೆನ್ನಿಗಾನಹಳ್ಳಿ ಅಪಾರ್ಟ್ಮೆಂಟ್ವೊಂದರಲ್ಲಿ ನಡೆದಿದೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತಮ ಹೆಗಡೆ(30) ಆತ್ಮಹತ್ಯೆ ಮಾಡಿಕೊಂಡವರು. ಮಗನ ವಿವಾಹ ಮಾಡಲು ಪೋಷಕರು ಮುಂದಾಗಿದ್ದರು. ಮದುವೆ ಮಾಡಿಕೊಳ್ಳಲು ಇಷ್ಟವಿಲ್ಲದ ಕಾರಣ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಕಂಡುಕೊಂಡಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.
ಬೆನ್ನಿಗಾನಹಳ್ಳಿ ಕೆರೆಯ ಕಣ್ಣಳತೆ ದೂರದಲ್ಲಿರುವ ಅಪಾರ್ಟ್ಮೆಂಟ್ವೊಂದರಲ್ಲಿ ಉತ್ತಮ ಹೆಗಡೆ ಕುಟುಂಬ ವಾಸವಾಗಿತ್ತು. ನಿನ್ನೆ ಎಂದಿನಂತೆಯೇ ಪೋಷಕರ ಜೊತೆ ಊಟ ಮಾಡಿ ಮಲಗಿಕೊಂಡಿದ್ದಾನೆ. ಮತ್ತೆ ಏನಾಯಿತೋ ಗೊತ್ತಿಲ್ಲ. ಇಂದು ನಸುಕಿನ ಜಾವ ಸುಮಾರು 3 ಗಂಟೆ ವೇಳೆಗೆ ಅಪಾರ್ಟ್ಮೆಂಟ್ ಮೇಲಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೃತದೇಹ ಕಂಡ ನೆರೆಮನೆಯವರು ಆತಂಕದಿಂದ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲು ಮೃತದೇಹವನ್ನು ರಾಮಮೂರ್ತಿ ನಗರ ಪೊಲೀಸರು ಸಿವಿ ರಾಮನ್ ನಗರ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.