ಬೆಂಗಳೂರು: ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಬದಲಾಯಿಸುವ ಮತ್ತು ನಿಜಾಮ ಸಂಸ್ಕೃತಿ ಅಂತ್ಯ ಮಾಡುವ ನಮ್ಮ ಭರವಸೆಗಳಿಗೆ ಅಲ್ಲಿನ ಜನ ಬೆಂಬಲಿಸಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಇದು ಪಕ್ಷದ ಕಾರ್ಯಕರ್ತರ ಜಯ. ಕೆಸಿಆರ್ ಅವರು ಸಾಕಷ್ಟು ಕೇಸ್ಗಳನ್ನು ಹಾಕಿದ್ರೂ ನಮ್ಮ ಕಾರ್ಯಕರ್ತರು ಶ್ರಮ ಹಾಕಿ ಕೆಲಸ ಮಾಡಿದ್ದಾರೆ. ಪ್ರತೀ ಚುನಾವಣೆಯಲ್ಲಿ ನಮ್ಮ ಪರ ಜನಬೆಂಬಲ ಹೆಚ್ಚಾಗುತ್ತಿದೆ. ಕುಟುಂಬ ಆಧಾರಿತ ರಾಜಕಾರಣ, ಭ್ರಷ್ಟ ಆಡಳಿತ ಮತ್ತು ಹಿಂದೂ ವಿರೋಧಿ ರಾಜನೀತಿ, ಈ ಮೂರು ಅಂಶಗಳ ವಿರುದ್ಧ ಜನ ಮತ ಹಾಕ್ತಿದ್ದಾರೆ. ಈ ಮೂರೂ ಅಂಶಗಳು ಹೈದರಾಬಾದ್ ನಲ್ಲಿವೆ. ಹಾಗಾಗಿ ಜನ ಬಿಜೆಪಿಗೆ ಬೆಂಬಲಿಸುತ್ತಿದ್ದಾರೆ ಎಂದಿದ್ದಾರೆ.
ಮುಂಬರುವ ದಿನಗಳಲ್ಲಿ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ. ಹೈದರಾಬಾದ್ ಮಹಾನಗರ ಪಾಲಿಕೆ ಫಲಿತಾಂಶ ಈ ಸುಳಿವು ಕೊಟ್ಟಿದೆ. ಫಲಿತಾಂಶದಿಂದ ಖಂಡಿತ ಸಂತೋಷ ಆಗಿದೆ. 4 ಸ್ಥಾನದಿಂದ 40 ಸ್ಥಾನ ದಾಟಿದ್ದೇವೆ. ಹತ್ತು ಪಟ್ಟು ಫಲಿತಾಂಶ ಹೆಚ್ಚಾಗಿದೆ. ಇದು ಸಾಧನೆಯೇ ಸರಿ. ಬಿಜೆಪಿ ಮತ್ತು ಮೋದಿಯವರ ಅಭಿವೃದ್ಧಿ ಕಾರ್ಯಗಳ ಮೇಲೆ ಜನ ನಂಬಿಕೆ ಇಟ್ಟುಕೊಂಡಿರುವುದನ್ನು ತೋರಿಸುತ್ತದೆ ಎಂದರು.
ಬಿಬಿಎಂಪಿ ಚುನಾವಣೆಗೆ ವೇಳಾಪಟ್ಟಿ ಹೊರಡಿಸಲು ಹೈಕೋರ್ಟ್ ನಿರ್ದೇಶನ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಬೆಂಗಳೂರಿಗೆ ವಿಶೇಷ ಕಾನೂನು ಬೇಕು. ಎಲ್ಲಾ ಸಮಸ್ಯೆಗಳಿಗೂ ವಿಶೇಷ ಕಾನೂನಿನಿಂದ ಪರಿಹಾರ ಸಾಧ್ಯ. ಆ ಕಾನೂನಿನಡಿ ಬೆಂಗಳೂರಿಗೆ ಕಾಯಕಲ್ಪ ಸಾಧ್ಯ. ಬಿಬಿಎಂಪಿ ಚುನಾವಣೆ ಯಾವಾಗ ಬಂದರೂ ಸರ್ಕಾರ ಸಿದ್ಧವಿದೆ. ಚುನಾವಣೆಯಲ್ಲಿ ಗೆಲ್ಲೋದು ಬಿಜೆಪಿಯೇ. ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ ಮಾಡುವ ಬಗ್ಗೆ ಸಿಎಂ ಮತ್ತು ಸಚಿವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಮೇಲ್ಮನವಿ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತೆ. ಚುನಾವಣೆ ಯಾವಾಗ ಬಂದರೂ ನಾವು ಸಿದ್ಧ ಎಂದಿದ್ದಾರೆ.