ಬೆಂಗಳೂರು: ಕೇರಳದಲ್ಲಿ ಮಲಯಾಳಂ ಭಾಷೆ ಗೊತ್ತಿದ್ದರೆ ಮಾತ್ರ ಸರ್ಕಾರಿ ಉದ್ಯೋಗ ಎಂದು ಕೇರಳ ಮುಖ್ಯಮಂತ್ರಿಗಳು ಹೇಳಿಕೆ ನೀಡಿರುವುದು ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನಲ್ಲಿ ನೆಲೆಸಿರುವ ಕನ್ನಡ ಭಾಷಿಕರಿಗೆ ತಮ್ಮ ಭಾಷೆಯಲ್ಲಿ ಸೌಲಭ್ಯಗಳನ್ನು ಪಡೆದುಕೊಳ್ಳುವುದರಿಂದ ವಂಚಿಸುವ ಪ್ರಯತ್ನವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್ ನಾಗಾಭರಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ 30/1ನೇ ವಿಧಿಯು ಭಾಷಾ ಅಲ್ಪಸಂಖ್ಯಾತರಿಗೆ ಅವರದ್ದೇ ಭಾಷೆಯಲ್ಲಿ ಶಿಕ್ಷಣ ಮತ್ತು ಆಡಳಿತವನ್ನು ಅನುಭವಿಸುವ ಮೂಲ ಹಕ್ಕನ್ನು ಒದಗಿಸಿರುತ್ತದೆ. ಕೇರಳದಲ್ಲಿರುವ ಕಾಸರಗೋಡನ್ನು ಸಂವಿಧಾನದ ಪ್ರಕಾರ ‘ಕನ್ನಡ ಭಾಷೆಯ ಅಲ್ಪಸಂಖ್ಯಾತ ಪ್ರದೇಶ’ಎಂದು ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಅವರದ್ದೇ ಭಾಷೆಯಲ್ಲಿ ಶಿಕ್ಷಣ ಮತ್ತು ಉದ್ಯೋಗ ಪಡೆದುಕೊಳ್ಳುವ ಅವಕಾಶವನ್ನು ಕಾಸರಗೋಡಿನ ಕನ್ನಡಿಗರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚಿಗೆ ಕೇರಳದ ಮುಖ್ಯಮಂತ್ರಿಗಳಾದ ಪಿಣರಾಯಿ ವಿಜಯನ್ ಅವರು ಮಲಯಾಳಂ ಭಾಷೆ ತಿಳಿದಿದ್ದರಷ್ಟೇ ಕೇರಳದಲ್ಲಿ ಸರ್ಕಾರಿ ಉದ್ಯೋಗ ಎಂದು ನೀಡಿರುವ ಹೇಳಿಕೆ ಕಾಸರಗೋಡಿನಲ್ಲಿರುವ ಕನ್ನಡಿಗರಿಗೆ ಭಾಷಾ ಅಲ್ಪಸಂಖ್ಯಾತರಡಿ ದೊರೆಯುತ್ತಿರುವ ಸೌಲಭ್ಯಗಳಿಗೆ ಧಕ್ಕೆಯನ್ನುಂಟು ಮಾಡುವಂತಿದೆ.
ಒಂದು ವೇಳೆ ಕೇರಳದ ಮುಖ್ಯಮಂತ್ರಿಗಳ ಹೇಳಿಕೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಅಲ್ಲಿನ ಸರ್ಕಾರ ಕ್ರಮ ವಹಿಸಲು ಮುಂದಾದರೆ ಈ ನಿಯಮದಿಂದ ಕಾಸರಗೋಡಿಗೆ ವಿನಾಯಿತಿ ನೀಡಬೇಕು ಎಂದು ಟಿ. ಎಸ್ ನಾಗಾಭರಣ ಆಗ್ರಹಿಸಿದ್ದಾರೆ. ಅಲ್ಲದೇ, ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಪಡೆದುಕೊಂಡು ಸರ್ಕಾರಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೂ ತೊಂದರೆಯಾಗಲಿದೆ ಎಂದು ತಿಳಿಸಿದ್ದಾರೆ.
ಇದುವರೆಗೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನಲ್ಲಿ ಮಲಯಾಳಂ ಭಾಷೆಯಿಂದ ವಿನಾಯಿತಿ ಇದ್ದು, ಅದು ಮುಂದುವರೆಯಬೇಕಿದೆ. ಒಂದು ವೇಳೆ ಕಾಸರಗೋಡಿನ ಕನ್ನಡಗರಿಗೂ ಮಲಯಾಳಿ ಭಾಷೆಯನ್ನು ಉದ್ಯೋಗದ ದೃಷ್ಟಿಯಿಂದ ಕಡ್ಡಾಯ ಮಾಡಿದರೆ ಅದು ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನತ್ಮಕವಾಗಿ ನೀಡಿದ ಹಕ್ಕಿನ ಉಲ್ಲಂಘನೆಯಾಗುತ್ತದೆ.
ಭಾಷಾ ಅಲ್ಪಸಂಖ್ಯಾತರಿಗೆ ಇರುವ ಸಂವಿಧಾನಾತ್ಮಕ ರಕ್ಷಣೆಗೆ ಭಂಗ ಬಂದಂತಾಗುತ್ತದೆ. ಈ ನಿಟ್ಟಿನಲ್ಲಿ ಕೇರಳದ ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆಯ ಬಗ್ಗೆ ಹಾಗೂ ಕಾಸರಗೋಡಿನಲ್ಲಿ ಇದರ ಅನುಷ್ಠಾನದ ಸಂಬಂಧ ಅಲ್ಲಿನ ಸರ್ಕಾರ ಮತ್ತೊಮ್ಮೆ ಪುನರ್ ಪರಿಶೀಲಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಒತ್ತಾಯಿಸಿದ್ದಾರೆ.