ಬೆಂಗಳೂರು: ಹೊಸವರ್ಷದ ಸಂಭ್ರಮ ಹಾಗೂ ಹುಟ್ಟುಹಬ್ಬದ ದಿನದ ಖುಷಿಯಲ್ಲಿದ್ದ ಪತ್ನಿ ಮೇಲೆ ಪತಿಯೊಬ್ಬ ಆಕೆಯ ಶೀಲ ಶಂಕಿಸಿ ನಡುರಸ್ತೆಯಲ್ಲೇ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಜ್ಞಾನಭಾರತಿ ಕ್ಯಾಂಪಸ್ ಬಳಿಯ ಮಾರುತಿನಗರದಲ್ಲಿ ವಾಸಿಸುತ್ತಿರುವ ನಾಜಿ ಎಂಬ ಗೃಹಿಣಿ ಹಲ್ಲೆಗೊಳಗಾದವರು. ಪತಿ ಅಲ್ತಾಫ್ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜ.1ರಂದು ರಾತ್ರಿ ವೇಳೆ ತನ್ನ ಹುಟ್ಟುಹಬ್ಬ ಆಚರಿಸಿಕೊಂಡು ತಾಯಿಯ ಜತೆ ನಗರದ ಜ್ಞಾನಭಾರತಿ ಕ್ಯಾಂಪಸ್ ಬಳಿಯ ಮಾರುತಿನಗರದಲ್ಲಿ ನಡೆದುಕೊಂಡು ತನ್ನ ಮನೆಗೆ ಹೋಗುತ್ತಿದ್ದರು. ಆಗ ಹಿಂದಿನಿಂದ ಬೈಕ್‌ನಲ್ಲಿ ಬಂದ ಪತಿ ತನ್ನ ಪತ್ನಿಯ ಶೀಲ ಶಂಕಿಸಿ ನಡು ರಸ್ತೆಯಲ್ಲೇ ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ಅಲ್ಲದೇ ಚಾಕುವಿನಿಂದ ಮನಬಂದಂತೆ ಹಲ್ಲೆ ಮಾಡಿದ್ದರಿಂದ ನಾಜಿಯ ತಲೆ,ಎದೆ, ಕೈ, ತೊಡೆ, ಹೊಟ್ಟೆ ಭಾಗಕ್ಕೆ ಇರಿದು ವಿಕೃತಿ ಮೆರೆದಿದ್ದಾನೆ. ಈ ವೇಳೆ ಸ್ಥಳೀಯ ನಿವಾಸಿ ಕುಮಾರ್ ಎಂಬುವರು ಪತಿಯಿಂದ ಬಿಡಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪೊಲೀಸ್ ನಿಯಂತ್ರಣ ಕೊಠಡಿ 100 ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಅಷ್ಟರಲ್ಲಾಗಲೇ ಪತಿ ಅಲ್ತಾಫ್ ಪರಾರಿಯಾಗಿದ್ದಾನೆ. ಸದ್ಯ ಈ ಕುರಿತು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಯಲ್ಲಿ ನಾಜಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.