ಬೆಂಗಳೂರು: ಹುಬ್ಬಳ್ಳಿಯಲ್ಲಿ ಅನುಮಾನಾಸ್ಪದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗುಪ್ತಚರ ಇಲಾಖೆ ಹಾಗೂ ರೈಲ್ವೆ ಪೊಲೀಸರು ಎಲ್ಲಾ ರೈಲ್ವೆ ನಿಲ್ದಾಣಗಳ ಭದ್ರತೆ ಪರಿಶೀಲನೆಯಲ್ಲಿ ತೊಡಗಿದ್ದಾರೆ. ರೈಲು ನಿಲ್ದಾಣ ಬಳಿ ಅನುಮಾನಾಸ್ಪದ ವ್ಯಕ್ತಿಗಳು ಹಾಗೆ ಅನುಮಾನಾಸ್ಪದ ಬ್ಯಾಗ್ಗಳನ್ನು ತಪಾಸಣೆ ನಡೆಸಿ ನಿಲ್ದಾಣದ ಒಳಗಡೆ ಬಿಡಲಾಗುತ್ತಿದೆ.
ನಿನ್ನೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಅಮರಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ ಬಾಂಬ್ ಪತ್ತೆಯಾಗಿತ್ತು. ಹೀಗಾಗಿ ರೈಲ್ವೆ ಪೊಲೀಸರು ಎಲ್ಲಾ ರೈಲ್ವೆ ನಿಲ್ದಾಣ ಬಳಿ ಅಹಿತಕರ ಘಟನೆಗಳು ನಡೆಯದ ರೀತಿ ಮುನ್ನೆಚ್ಚರಿಕೆ ವಹಿಸಿದ್ದಾರೆ. ಬೆಂಗಳೂರಿನ ಹಿರಿಯ ಅಧಿಕಾರಿಗಳ ತಂಡವು ರೈಲು ನಿಲ್ದಾಣದಲ್ಲಿ ತಪಾಸಣೆ ಮುಂದುವರೆಸಿದೆ.
ಇನ್ನು, ರೈಲ್ವೆ ಇಲಾಖೆ ಪರಿಣಿತರು ನಿನ್ನೆ ವಿಜಯವಾಡದಿಂದ ಹುಬ್ಬಳ್ಳಿಗೆ ಆಗಮಿಸಿದ್ದ ಅಮರಾವತಿ ಎಕ್ಸ್‌ಪ್ರೆಸ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅಮರಾವತಿ ಎಕ್ಸ್‌ಪ್ರೆಸ್ ಒಟ್ಟು 24 ಕಡೆ ನಿಲುಗಡೆ ನೀಡಿ, ಹುಬ್ಬಳ್ಳಿಗೆ ಬಂದಿತ್ತು. ಈ ರೈಲು 17 ಕೋಚ್ಗಳನ್ನ ಹೊಂದಿದ್ದು, ಒಟ್ಟು 694 ಕಿ.ಮೀ ದೂರ ಕ್ರಮಿಸಿತ್ತು. ಹೀಗಾಗಿ 24 ನಿಲ್ದಾಣಗಳಲ್ಲಿನ ಸಿಸಿಟಿವಿಗಳನ್ನು ಗುಪ್ತಚರ ಇಲಾಖೆ ಹಾಗೂ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.