ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ಕಪ್ಪು ಬಣ್ಣದ ಬ್ಯಾಗ್ ಪತ್ತೆಯಾಗಿದ್ದು, ಕೆಲ ಕಾಲ ಏರ್ಪೋರ್ಟ್ನಲ್ಲಿ ಪ್ರಯಾಣಿಕರು ಭಯಭೀತರಾದ ಘಟನೆ ತಡ ರಾತ್ರಿ ನಡೆದಿದೆ.
ಬ್ಯಾಗ್ ನೋಡಿ ಕಂಗಾಲಾದ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಕಪ್ಪು ಬಣ್ಣದ ಬ್ಯಾಗ್ ನೋಡಿದ ಪೊಲೀಸರ ಜೊತೆಯಲ್ಲಿ ಬಾಂಬ್ ಸ್ಕ್ವಾಡ್ ಹಾಗೂ ಶ್ವಾನದಳದಿಂದ ತಪಾಸಣೆ ನಡೆಸಿದರು. ರಾತ್ರಿ ಸುಮಾರು 2 ಗಂಟೆಯಲ್ಲಿ ಸುಮಾರು 10 ನಿಮಿಷಗಳ ಕಾಲ ಬ್ಯಾಗನ್ನು ಪೊಲೀಸರು ತಪಾಸಣೆ ನಡೆಸಿದ್ದಾರೆ. ಯಾರೋ ಅಪರಿಚಿತರು ಜನರನ್ನು ಭಯಪಡಿಸೋಕೆ ಬ್ಯಾಗ್ ಇಟ್ಟಿರೋ ಅನುಮಾನ ವ್ಯಕ್ತವಾಗಿದ್ದು, ಬ್ಯಾಗ್ ಯಾರದ್ದು, ಯಾಕೆ ಇಟ್ಟಿದ್ದರು ಅನ್ನುವುದರ ಮಾಹಿತಿಯನ್ನು ಏರ್‌ಪೋರ್ಟ್ ಪೊಲೀಸರು ಕಲೆ ಹಾಕುತ್ತಿದ್ದಾರೆ.
ಬ್ಯಾಗ್ ಮರೆತು ಹೋದ ಪ್ರಯಾಣಿಕರು:
ರಾತ್ರಿ ಪ್ರಯಾಣಿಕರು ಮರೆತು ಈ ಬ್ಯಾಗ್‌ನ ಬಿಟ್ಚು ಹೋಗಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಡುವ ಅವಸರದಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದಾರೆ. ನಂತರ ಮತ್ತೆ ಏರ್ಪೋರ್ಟ್ಗೆ ಬಂದು ಬ್ಯಾಗ್‌ನ ತೆಗೆದುಕೊಂಡು ಹೋಗಿದ್ದಾರೆ. ಬ್ಯಾಗ್‌ನಲ್ಲಿ ಬಟ್ಟೆಗಳು ಮಾತ್ರ ಸಿಕ್ಕಿವೆ. ಬ್ಯಾಗ್ ಮರೆತು ಹೋಗಿ ಮತ್ತೆ ಬಂದ ಪ್ರಯಾಣಿಕರಿಗೆ ಈ ರೀತಿ ಮತ್ತೆ ನಡೆದುಕೊಳ್ಳದಂತೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.