ಚಿಕ್ಕೋಡಿ: ರಾಜ್ಯಾದ್ಯಂತ ಬಾಣಂತಿಯರ ಸಾವಿಗೆ ಕೊನೆಯೇ ಇಲ್ಲದಂತಾಗಿದ್ದು, ಇಂದು ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರು ಸಾವನ್ನಪ್ಪಿದ್ದಾರೆ, ಇದಕ್ಕೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಥಣಿ ಪಟ್ಟಣದ ನಿವಾಸಿ ಮುತ್ತವ್ವ ಸಂತೋಷ ಗೊಳಸಂಗಿ (21) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಮೃತ ಮಹಿಳೆ ಪತಿ ಆರೋಪ ಇದು: ಮೃತ ಮಹಿಳೆಯ ಪತಿ ಸಂತೋಷ್ ಗೊಳಸಂಗಿ ಮಾತನಾಡಿ, "31 ಹೆರಿಗೆಗೆ ದಿನಾಂಕ ನೀಡಿದ್ದರು ವೈದ್ಯರು. ಬುಧವಾರ ಮಧ್ಯಾಹ್ನ ಅಥಣಿ ಸರ್ಕಾರಿ ಆಸ್ಪತ್ರೆಗೆ ತಪಾಸಣೆಗೆಂದು ಬಂದೆವು. ಅವರು ಕೆಲವು ತಪಾಸಣೆ ಮಾಡಿದರು. ನಂತರ ನೀರು ಕಡಿಮೆ ಆಗಿರುವುದರಿಂದ ಒಂದು ಇಂಜೆಕ್ಷನ್ ಕೊಡುತ್ತೇವೆ ಎಂದರು. ಆಮೇಲೆ ಕೆಲವು ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ನಮ್ಮನ್ನು ದೂರ ಕಳುಹಿಸಿ ಸಮಾಲೋಚನೆ ನಡೆಸಿದರು. ಅಷ್ಟರಲ್ಲಿ ನನ್ನ ಹೆಂಡತಿ ತುಂಬಾ ನೋವಾಗುತ್ತಿದೆ ಎಂದು ಹೇಳಿದರು. ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗುವುದು ಎಂದರು. ಹೆಣ್ಣುಮಗು ಜನನವಾಯಿತು. ನಂತರ ಆರೋಗ್ಯದಲ್ಲಿ ಏರುಪೇರು ಆಗುತ್ತಿದ್ದಂತೆ, ವೈದ್ಯರು ಖಾಸಗಿ ಆಸ್ಪತ್ರೆಗೆ ಖಾಸಗಿ ವಾಹನದಲ್ಲಿ ಕಳುಹಿಸಿದರು. ಅಷ್ಟರಲ್ಲಿ ನನ್ನ ಹೆಂಡತಿ ತೀರಿಹೋದಳು. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ನಮಗೆ ನ್ಯಾಯ ಬೇಕು" ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಈ ಕುರಿತು ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಬಗ್ಗೆ ವೈದ್ಯಾಧಿಕಾರಿಗಳ ಸ್ಪಷ್ಟನೆ ಹೀಗಿದೆ; ಅಥಣಿಯ ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ತಾಲೂಕು ವೈದ್ಯಾಧಿಕಾರಿ ಬಸವರಾಜ್ ಕಾಗೆ ಈಟಿವಿ ಭಾರತ ಜೊತೆ ದೂರವಾಣಿ ಮುಖಾಂತರ ಮಾತನಾಡಿ, "ನಾನು ಕೂಡ ಬುಧವಾರ ಇಲಾಖೆಗೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮೀಟಿಂಗ್ ಇದ್ದ ಕಾರಣ ಅಲ್ಲಿ ಭಾಗಿಯಾಗಿದ್ದೆ. ಇವತ್ತು ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಮೃತ ಗರ್ಭಿಣಿಯ ಮೃತದೇಹವನ್ನು ಮರನೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಶಸ್ತ್ರಚಿಕಿತ್ಸೆ ಸಮಯಕ್ಕಿಂತಲೂ ಮೊದಲು ಆ ಮಹಿಳೆಯ ಆರೋಗ್ಯದಲ್ಲಿ ಏರುಪೇರು ಆಗಿತ್ತು ಎಂದು ನಮ್ಮ ವೈದ್ಯರು ತಿಳಿಸಿದ್ದಾರೆ. ಅದು ಏನೇ ಇದ್ದರೂ ವರದಿ ಬಂದ ಬಳಿಕ ಸ್ಪಷ್ಟತೆ ಗೊತ್ತಾಗುವುದು. ಈ ಕುರಿತು ನಮ್ಮ ಹಿರಿಯ ಅಧಿಕಾರಿಗಳಿಗೆ ವರದಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ರಾಯಚೂರು: ರಿಮ್ಸ್ನಲ್ಲಿ ಸಿಸೇರಿಯನ್ ಹೆರಿಗೆಗೆ ಒಳಗಾಗಿದ್ದ ಬಾಣಂತಿ, ಶಿಶು ಸಾವು