ನವದೆಹಲಿ/ಬೆಂಗಳೂರು: ಮಾದಕದ್ರವ್ಯ ವಿಚಾರದಲ್ಲಿ ನಾವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ. ರಾಜ್ಯದಲ್ಲಿ ಅನೇಕ ಆಫ್ರಿಕನ್ ಪ್ರಜೆಗಳಿದ್ದಾರೆ, ಅವರಲ್ಲಿ ಕೆಲವರು ವೀಸಾ ಅವಧಿ ಮುಗಿದ ನಂತರವೂ ಉಳಿದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ರಾಜ್ಯ ಸಚಿವ ಸಂಪುಟ ರಚನೆ ಸಂಬಂಧ ದೆಹಲಿ ಪ್ರವಾಸದಲ್ಲಿದ್ದ ಸಿಎಂ, ಬೆಂಗಳೂರು ಪೊಲೀಸರ ವಶದಲ್ಲಿದ್ದ ವಿದೇಶಿ ಪ್ರಜೆ ಸಾವು ಆರೋಪ ಪ್ರಕರಣ ಹಾಗೂ ಲಾಠಿ ಚಾರ್ಜ್ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಳೆದ ಎರಡು ವರ್ಷಗಳಿಂದ, ನಾವು ಮಾದಕದ್ರವ್ಯ ಸಮಸ್ಯೆ ಬಗ್ಗೆ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಅನೇಕ ಆಫ್ರಿಕನ್ ಪ್ರಜೆಗಳಿದ್ದಾರೆ, ಅವರಲ್ಲಿ ಕೆಲವರು ವೀಸಾ ಅವಧಿ ಮುಗಿದ ನಂತರವೂ ಉಳಿದುಕೊಂಡಿದ್ದಾರೆ. ಸಂಬಂಧಪಟ್ಟ ಕಾನೂನಿನಡಿ ಅಂತಹವರನ್ನು ಬಂಧಿಸಿ ಕ್ರಮ ಜರುಗಿಸಲಾಗುತ್ತಿದೆ ಎಂದರು.
ಪ್ರತಿಭಟನೆ ವೇಳೆ ನೈಜಿರಿಯನ್ ಪ್ರಜೆಗಳು ಹಿಂಸಾತ್ಮಕವಾಗಿ ವರ್ತಿಸಿದ್ದಾರೆ. ಅನಗತ್ಯವಾಗಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರಿಂದ ಲಾಠಿ ಚಾರ್ಜ್ ಮಾಡಲಾಗಿದೆ. ಜಾಗರೂಕತೆ, ಹಿಂಸಾತ್ಮಕವಾಗಿ ವರ್ತಿಸಿದ್ದರಿಂದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಘಟನೆ ಬಗ್ಗೆ ಸಿಐಡಿ ವಿಚಾರಣೆ ನಡೆಸಲಿದೆ ಎಂದರು.
ಡ್ರಗ್ಸ್ ಕೇಸ್ಗೆ ಸಂಬಂಧಿಸಿದಂತೆ ಆಫ್ರಿಕಾ ಪ್ರಜೆ ಜೊವಲ್ ಮಲ್ಲು ಎಂಬುವನನ್ನು ಜೆ.ಸಿ. ನಗರ ಪೊಲೀಸರು ಬಂಧಿಸಿದ್ದರು. ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಆರೋಗ್ಯದಲ್ಲಿ ಏರುಪೇರಾಗಿ ಆರೋಪಿ ಸಾವನ್ನಪ್ಪಿದ್ದಾನೆ ಎನ್ನಲಾಗ್ತಿದೆ.
ಆಕ್ರೋಶಗೊಂಡ ಆರೋಪಿಯ ಕಡೆಯವರು ಜೆ.ಸಿ. ನಗರ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಸಿಗರೇಟ್ ಸೇದುತ್ತ, ಪೊಲೀಸರನ್ನು ನಿಂದಿಸುತ್ತ ಹೈಡ್ರಾಮಾ ಸೃಷ್ಟಿಸಿದ್ದರು. ಪೊಲೀಸರ ಮೇಲೆ ಹಲ್ಲೆಗೂ ಮುಂದಾದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.
ಇದನ್ನೂ ಓದಿ: ಬೆಂಗಳೂರು ಪೊಲೀಸರ ವಶದಲ್ಲಿದ್ದ ವಿದೇಶಿ ಪ್ರಜೆ ಸಾವು ಆರೋಪ: ಠಾಣೆ ಮುಂದೆ ಹೈಡ್ರಾಮಾ, ಖಾಕಿಯಿಂದ ಲಾಠಿ ಚಾರ್ಜ್