ಬೆಂಗಳೂರು: ಕೂರ್ಗ್ ಅರಬೇಕಾ ಕಾಫಿ, ಚಿಕ್ಕಮಗಳೂರು ಅರಬೇಕಾ ಕಾಫಿ, ಬಾಬಾಬುಡನಗಿರಿ ಕಾಫಿ, ಮೈಸೂರು ಸಿಲ್ಕ್, ದೇವನಹಳ್ಳಿ ಪೊಮೆಲೊ, ಬೆಂಗಳೂರು ಬ್ಲೂ ಗ್ರೇಪ್ಸ್, ಬೆಂಗಳೂರು ರೋಜ್ ಆನೊಯನ್, ಮೈಸೂರು ಸ್ಯಾಂಡಲ್ ಸೋಪ್, ಕೊಲ್ಲಾಪುರಿ ಚಪ್ಪಲ್, ಮೈಸೂರು ಅಗರಬತ್ತಿ ಉತ್ಪನ್ನಗಳ ಚಿತ್ರಗಳನ್ನು ಒಳಗೊಂಡ 10 ವಿಶೇಷ ಅಂಚೆ ಲಕೋಟೆಗಳನ್ನು ಇಂದು ನಗರದ ಜಿಪಿಒ ಕೇಂದ್ರ ಕಚೇರಿಯಲ್ಲಿ ತೋಟಗಾರಿಕೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಮುನಿರತ್ನ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಈಟಿವಿ ಭಾರತದ ಜೊತೆಗೆ ಮಾತನಾಡಿದ ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್, ಕರ್ನಾಟಕದ ವಿವಿಧ ಪ್ರಾದೇಶಿಕ ಸೂಚ್ಯಂಕ ಪಡೆದಿರುವ ಉತ್ಪನ್ನಗಳ ಬಗ್ಗೆ ಜಾಗೃತಿ ಮತ್ತು ಪ್ರಚಾರ ನೀಡಲು ಭಾರತೀಯ ಅಂಚೆ ಇಲಾಖೆ ಕರ್ನಾಟಕ ಅಂಚೆ ವೃತ್ತದಿಂದ ಕಾಫಿ ಮಂಡಳಿ, ತೋಟಗಾರಿಕಾ ಇಲಾಖೆ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ, ರೇಷ್ಮೆ ಕೈಮಗ್ಗ ನಿಯಮಿತ , ಕರ್ನಾಟಕ ಚರ್ಮ ಕೈಗಾರಿಕಾ ಅಭಿವೃದ್ಧಿ ಮಂಡಳಿ ಮತ್ತು ಅಖಿಲ ಭಾರತ ಅಗರಬತ್ತಿ ಉತ್ಪನ್ನ ತಯಾರಕರ ಸಂಘಗಳ ಪ್ರಾಯೋಜಕತ್ವದಲ್ಲಿ ಹತ್ತು ಅಂಚೆ ಲಕೋಟೆಗಳನ್ನು ಬಿಡುಗಗಡೆಗೊಳಿಸಲಾಗಿದೆ ಎಂದು ತಿಳಿಸಿದರು.
ಈ ವಿಶೇಷ ಅಂಚೆ ಲಕೋಟೆಗಳು ಕರ್ನಾಟಕ ಅಂಚೆ ವೃತ್ತದಲ್ಲಿರುವ ಬೆಂಗಳೂರಿನ ಜಿ.ಪಿ.ಓ ಫಿಲಾಟೆಲಿ ಬ್ಯೂರೋ , ಮಂಗಳೂರಿನ ಮುಖ್ಯ ಅಂಚೆ ಕಚೇರಿ, ಮೈಸೂರಿನ ಮುಖ್ಯ ಅಂಚೆ ಕಛೇರಿ, ಬೆಳಗಾವಿಯ ಮುಖ್ಯ ಅಂಚೆ ಕಚೇರಿ ಮತ್ತು ಈ ಪೋಸ್ಟ್ ಆಫೀಸ್ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ.