ಬೆಂಗಳೂರು: ಕೆಎಎಸ್ ಹುದ್ದೆ ಸೃಜನೆ ಮಾಡಿ ಡಾ. ಮೈತ್ರಿ ಅವರನ್ನು ನೇಮಕ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಯಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ) ಮಹಿಳಾ ಮೀಸಲಾತಿಯಡಿ ಗ್ರೂಪ್ 'ಎ' ವೃಂದದ ಕೆಎಎಸ್ (ಕಿರಿಯ ಶ್ರೇಣಿ) ಹುದ್ದೆ ನೀಡಬೇಕೆಂಬ ಡಾ.ಮೈತ್ರಿ ಅವರ ಮನವಿಯನ್ನು ಸರ್ಕಾರ ಪುರಸ್ಕರಿಸಿದೆ. ಅವರಿಗಾಗಿ ಒಂದು ಸೂಪರ್ ನ್ಯೂಮರರಿ ಹುದ್ದೆ (ಸಂಖ್ಯಾತಿರಿಕ್ತ) ಸೃಜಿಸಿ ನೇಮಕಾತಿ ಮಾಡಲು ನಿರ್ಧರಿಸಿದೆ.
ಡಾ. ಮೈತ್ರಿ ಅವರ ಮನವಿ ಪರಿಗಣಿಸಲು ಆಗುವುದಿಲ್ಲವೆಂದು ಮುಖ್ಯ ಕಾರ್ಯದರ್ಶಿ ಸ್ಪಷ್ಟ ಅಭಿಪ್ರಾಯ ನೀಡಿದ್ದರೂ, ಫೆಬ್ರವರಿ 9 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮೈತ್ರಿ ಅವರಿಗಾಗಿ ಸೃಜಿಸುವ ಹುದ್ದೆಗೆ, ಮುಂದಿನ ನೇಮಕಾತಿಯಲ್ಲಿ ಕೆಎಎಸ್ (ಕಿರಿಯ ಶ್ರೇಣಿ) ವೃಂದದಲ್ಲಿ ಒಂದು ಎಸ್‌ಟಿ ಮಹಿಳಾ ಮೀಸಲಾತಿ ಹುದ್ದೆ ಕಡಿತಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
2011ನೇ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಕೆಪಿಎಸ್‌ಸಿ ನಡೆಸಿದ್ದ ನೇಮಕಾತಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ (ಆರ್‌ಡಿಪಿಆರ್) ಕಾರ್ಯನಿರ್ವಾಹಕ ಅಧಿಕಾರಿ (ಗ್ರೂಪ್ 'ಎ') ಹುದ್ದೆಗೆ ಆಯ್ಕೆಯಾಗಿದ್ದ ಮೈತ್ರಿ ಅವರಿಗೆ 2022 ಏಪ್ರಿಲ್ 8 ರಂದು ನೇಮಕಾತಿ ಆದೇಶ ನೀಡಲಾಗಿತ್ತು. ಏ.25 ರಿಂದ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಸಾಲಿನ ಆಯ್ಕೆ ಪಟ್ಟಿಯಲ್ಲಿ ಎಸ್‌ಟಿ- ಮಹಿಳೆ ಮೀಸಲಾತಿಯಲ್ಲಿ ಕೆಎಎಸ್ (ಕಿರಿಯ ಶ್ರೇಣಿ) ಹುದ್ದೆಗೆ ಸುಪ್ರಿಯಾ ಬನಗರ್ ಆಯ್ಕೆಯಾಗಿದ್ದು, ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ.
ಕಳೆದ ವರ್ಷದ ಜೂನ್ 29ರಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದ ಮೈತ್ರಿ, ಮುಖ್ಯ ಪರೀಕ್ಷೆಯಲ್ಲಿ 1,009 ಅಂಕ ಗಳಿಸಿದ್ದರೂ ಕೆಪಿಎಸ್‌ಸಿ ಸದಸ್ಯರು ದುರುದ್ದೇಶದಿಂದ ಮೌಖಿಕ ಸಂದರ್ಶನದಲ್ಲಿ 75 ಅಂಕ ನೀಡಿದ್ದರು. ನನ್ನದೇ ವರ್ಗದ (ಎಸ್‌ಟಿ) ಮತ್ತೊಬ್ಬ ಮಹಿಳಾ ಅಭ್ಯರ್ಥಿ ಮುಖ್ಯ ಪರೀಕ್ಷೆಯಲ್ಲಿ 937.5 ಅಂಕ ಗಳಿಸಿದ್ದು, ಅವರಿಗೆ ಮೌಖಿಕ ಸಂದರ್ಶನದಲ್ಲಿ 150 ಅಂಕ ನೀಡಲಾಗಿದೆ. ಇದರಿಂದಾಗಿ ನಾನು ಕೆಎಎಸ್ ಹುದ್ದೆ ವಂಚಿತಳಾಗಿದ್ದೇನೆ. ಮುಖ್ಯ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದಿರುವುದರಿಂದ ನನಗೆ ಹುದ್ದೆ ನೀಡಬೇಕು ಎಂದು ಮೈತ್ರಿ ಮನವಿ ಮಾಡಿದ್ದರು.
ಈ ಮನವಿಯನ್ನು ಪರಿಗಣಿಸಿ ಕ್ರಮ ವಹಿಸುವಂತೆ ಎಂದು ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚಿಸಿದ್ದರು. ಈ ಬಗ್ಗೆ ಅಭಿಪ್ರಾಯ ನೀಡಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಕಾರ್ಯದರ್ಶಿ ಪಿ. ಹೇಮಲತಾ, ಕೆಪಿಎಸ್‌ಸಿ ಸಾಂವಿಧಾನಿಕ ಸಂಸ್ಥೆ. ಅಂತಹ ಸಂಸ್ಥೆ ಪ್ರಕಟಿಸಿದ ಆಯ್ಕೆ ಪಟ್ಟಿಯನ್ನು ಕೋರ್ಟ್ ಆದೇಶದ ಹೊರತಾಗಿ ಬದಲಿಸಲಾಗದು. ಬದಲಿಸಿದರೆ ಕಾನೂನುಬಾಹಿರವಾಗುತ್ತದೆ. ಈ ಸಾಲಿನ ನೇಮಕಾತಿಗೆ ರೂಪಿಸಿದ ವಿಶೇಷ ಕಾಯ್ದೆಯಲ್ಲೂ ಅದಕ್ಕೆ ಅವಕಾಶ ಇಲ್ಲ. ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿ ನಿಯಮಗಳಲ್ಲೂ ಆಸ್ಪದವಿಲ್ಲ. ಅರ್ಜಿದಾರಳನ್ನು (ಮೈತ್ರಿ) ಸಹಾಯಕ ಆಯುಕ್ತ (ಎ.ಸಿ) ಹುದ್ದೆಗೆ ಪರಿಗಣಿಸಲು ಕಾನೂನು ಅವಕಾಶಗಳು ಇಲ್ಲದಿರುವುದರಿಂದ ಮತ್ತು ಒಂದೊಮ್ಮೆ ಹುದ್ದೆ ನೀಡಿದರೆ ಆಯ್ಕೆ ಪಟ್ಟಿಯಲ್ಲಿ ಆಕೆಗಿಂತ ಮೇಲಿರುವ ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಿದ್ದರು.
ಮುಖ್ಯಮಂತ್ರಿ ಅವರಿಗೆ ಕಡತ ಮಂಡಿಸಿದ್ದ ಮುಖ್ಯ ಕಾರ್ಯದರ್ಶಿ, ಈ ಸಾಲಿನ ಆಯ್ಕೆ ಪಟ್ಟಿಯಲ್ಲಿ ಮೈತ್ರಿ ಅವರಿಗಿಂತ 161 ಅಭ್ಯರ್ಥಿಗಳು ಮೇಲಿನ ಸ್ಥಾನಗಳಲ್ಲಿ ಇದ್ದಾರೆ. ಅವರೆಲ್ಲರಿಗೂ ಕೆಎಎಸ್ ಅಲ್ಲದೆ, ಬೇರೆ ಬೇರೆ ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. ಆಯ್ಕೆ ಪಟ್ಟಿಯಲ್ಲಿ ತುಂಬಾ ಕೆಳಗಿರುವ ಅಭ್ಯರ್ಥಿಯೊಬ್ಬರಿಗೆ (ಮೈತ್ರಿ) ಮನಬಂದಂತೆ ಕೆಎಎಸ್ ಹುದ್ದೆ ಹಂಚಿಕೆಗೆ ಅವಕಾಶವಿಲ್ಲ ಎಂದು ಅಭಿಪ್ರಾಯ ನೀಡಿದ್ದರು. ಆದರೆ, ಮೈತ್ರಿ ಅವರ ಮನವಿಯನ್ನು ತಿರಸ್ಕರಿಸಬೇಕು ಎಂಬ ಡಿಪಿಎಆರ್ ಪ್ರಸ್ತಾವವನ್ನು ಒಪ್ಪದ ಸಚಿವ ಸಂಪುಟ ಸಭೆ, ಮೈತ್ರಿಗಾಗಿಯೇ ಒಂದು ಹುದ್ದೆ ಸೃಜಿಸಿ ನೇಮಕ ಮಾಡಲು ನಿರ್ಧರಿಸಿದೆ.
ಇದನ್ನೂ ಓದಿ: 2011 ಸಾಲಿನಲ್ಲಿ ಆಯ್ಕೆಯಾದ 30 ಅಭ್ಯರ್ಥಿಗಳಿಗೆ ತಹಶೀಲ್ದಾರ್ ಗ್ರೇಡ್ -2 ವೃಂದದ ಗ್ರೂಪ್ ಬಿ ಹುದ್ದೆಗೆ ನೇಮಕ ಮಾಡಿ ಆದೇಶ