ಬೆಂಗಳೂರು: ಕೊರೊನಾ ವೈರಸ್ ವಿಚಾರದಲ್ಲಿ ರಾಜ್ಯದ ಜನತೆ 45 ದಿನಗಳಿಂದಲೂ ಸರ್ಕಾರಕ್ಕೆ ಸಹಕಾರ ನೀಡುತ್ತಾ ಬಂದಿದ್ದಾರೆ. ಆದರೆ, ಈ ವಿಚಾರದಲ್ಲಿ ಸರ್ಕಾರದ ಸಾಧನೆ ಶೂನ್ಯ ಎಂದು ಮಾಜಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಜೊತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಂದು ಮಾಡಿದ ಚರ್ಚೆಯನ್ನೇ ಇಂದಿಗೂ ಮಾಡುತ್ತಿದ್ದೇವೆ. ರೋಗ ನಿಯಂತ್ರಣ ವಿಚಾರದಲ್ಲಿ ಸ್ಪಷ್ಟತೆ, ನಿಖರತೆ ಇಲ್ಲವಾಗಿದೆ. ರೋಗ ಹೇಗೆ ವ್ಯಾಪಿಸಿದೆ, ಸಮುದಾಯವನ್ನು ತಲುಪಿದೆಯಾ? ಇಲ್ಲವಾ? ಅನ್ನುವುದನ್ನು ಐಸಿಎಂಆರ್ ವರದಿ ಮೂಲಕ ತಿಳಿಸಬೇಕು. ಈವರೆಗೂ ರಾಜ್ಯ ಸರ್ಕಾರಕ್ಕೆ ವರದಿ ಕೊಟ್ಟಿಲ್ಲ. ಈ ವಿಚಾರವಾಗಿ ರಾಜ್ಯದ ಅಧಿಕಾರಿಗಳು ಐಸಿಎಂಆರ್‌ಗೆ ಪತ್ರ ಕೂಡ ಬರೆದಿದ್ದಾರೆ. ಈ ವಿಚಾರದಲ್ಲಿ ಸರ್ಕಾರಕ್ಕೆ ವರದಿ ಬಹಿರಂಗ ಪಡಿಸದಿದ್ದಲ್ಲಿ, ಕೋರ್ಟ್ ಮುಖೇನ ಮುಂದುವರಿಯಲಾಗುವುದು ಎಂದರು.
ಅನ್ಯ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಬಸ್ನಲ್ಲಿ ಕರೆತರುವ ಕೆಲಸ ಆಗಬೇಕು. ವಿದೇಶದಿಂದ ಕನ್ನಡಿಗರನ್ನು ಕರೆತರುವ ಕೆಲಸ ಆಗ್ತಿದೆ. ಕರಾವಳಿ ಭಾಗದ ಜನರೂ ವಿದೇಶದಲ್ಲಿ ಇದ್ದಾರೆ. ಬೆಂಗಳೂರು ಹಾಗೂ ಮಂಗಳೂರಿಗೆ ವಿಮಾನದ ಮೂಲಕ ಕರೆತರುವ ವ್ಯವಸ್ಥೆ ಮಾಡಬೇಕು. ಈವರೆಗೆ ಎಷ್ಟು ಜನರನ್ನು ಕ್ವಾರೆಂಟೈನ್ ಮಾಡಿರುವುದಾಗಿ ಪಟ್ಟಿ ಕೊಟ್ಟಿಲ್ಲ. ಲಾಕ್ಡೌನ್ ವಿಚಾರದಲ್ಲಿ ಸರ್ಕಾರ ಸೂಕ್ತ ಪ್ಲ್ಯಾನ್ ಮಾಡಿಲ್ಲ. ಕ್ರಿಯಾ ಯೋಜನೆ ರೂಪಿಸುವಲ್ಲಿಯೂ ಎಡವಿದೆ ಎಂದರು.
ಜಿಡಿಪಿ ಕುಸಿತ ಕಂಡಿದೆ. ಇದಕ್ಕೆ ಕೊರೊನಾ ಕಾರಣ ಅಲ್ಲ: ಶೇ 9 ರಷ್ಟಿದ್ದ ಜಿಡಿಪಿ, ಕೊರೊನಾ ಮುನ್ನವೇ ಶೇ 3 ಕ್ಕೆ ಕುಸಿದಿತ್ತು. ಈಗ ಶೂನ್ಯಕ್ಕೆ ಬಂದಿದೆ. ಸೋಂಕಿನಿಂದಾಗಿ ಕೇವಲ 3 ರಷ್ಟು ಮಾತ್ರ ಜಿಡಿಪಿ ಕುಸಿದಿದೆ. ಉಳಿದ 6 ರಷ್ಟು ಕುಸಿತಕ್ಕೆ ಕೇಂದ್ರ ಸರ್ಕಾರದ ವೈಫಲ್ಯ ಕಾರಣ. ರಾಜ್ಯದ ಸಮಸ್ಯೆಗಳಿಗೆ ಕಾರಣ ಹೇಳದೇ ಕೇಂದ್ರ ಸರ್ಕಾರ ಸ್ಪಂದಿಸಬೇಕೆಂದರು.
ಪ್ರಧಾನಿ ಫಂಡ್ನಿಂದ ಯಾವ ರಾಜ್ಯಕ್ಕೆ ಎಷ್ಟು ಕೊಟ್ಟಿದ್ದೀರಿ?
ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮಾತನಾಡಿ, ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮಾಡಲು ಪ್ರಧಾನಿ ನರೇಂದ್ರ ಮೋದಿ ಹೊರಟಿದ್ದಾರೆ. ಪೆಟ್ರೋಲ್ ಡೀಸಲ್ಗೆ 69ರಷ್ಟು ತೆರಿಗೆ ವಿಧಿಸಿರುವ ರಾಷ್ಟ್ರ ಭಾರತವಾಗಿದೆ. ಅಷ್ಟೂ ತೆರಿಗೆ ಜನ ಭರಿಸಬೇಕು. ಆದರೆ ಪ್ರಧಾನಿ ಫಂಡ್ನಿಂದ ಯಾವ ರಾಜ್ಯಕ್ಕೆ ಎಷ್ಟು ಕೊಟ್ಟಿದ್ದೀರಿ ತಿಳಿಸಿ ಎಂದರು.
2 ಲಕ್ಷ ಕೋಟಿ ತೆರಿಗೆ ಹಣದಲ್ಲಿ ರಾಜ್ಯಕ್ಕೆ 50 ಸಾವಿರ ಕೋಟಿ ಬಿಡುಗಡೆ ಮಾಡಿ. ಕೇವಲ ದೀಪ ಬೆಳಗುವುದರಿಂದ, ಚಪ್ಪಾಳೆ ತಟ್ಟುವುದರಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ. ದೆಹಲಿ ಹಾಗೂ ಪಶ್ಚಿಮ ಬಂಗಾಳದ ಕೊರೊನಾ ಪೀಡಿತರ ಅಂಕಿ ಸಂಖ್ಯೆ ವಿಚಾರದಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ಎಷ್ಟು ಜನರಿಗೆ ಕೊರೊನಾ ಪಾಸಿಟಿವ್, ನೆಗೆಟಿವ್ ಇದೆ ಎಂದು ತಿಳಿಯಬೇಕಿದ್ದರೆ ಸರಳವಾಗಿ ಐ ಸಿ ಎಂ ಆರ್ ನಿಮ್ಮ ವ್ಯಾಪ್ತಿಗೆ ಬರುತ್ತದೆ. ಅವರನ್ನೇ ಕೇಳಿ ಎಂದು ಸಲಹೆಯನ್ನಿಟ್ಟರು.