ಬೆಂಗಳೂರು: ರಾಜ್ಯ ಹಾಗೂ ರಾಷ್ಟ್ರದಲ್ಲಿ ಪಕ್ಷ ಸಂಘಟನೆಗೆ ನಾಯಕರುಗಳು ಸ್ವಪ್ರತಿಷ್ಠೆ ಬಿಟ್ಟು ಒಂದಾಗಿ ಕಾರ್ಯನಿರ್ವಹಣೆಗೆ ಮುಂದಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕರೆ ಕೊಟ್ಟಿದ್ದಾರೆ.
ಕೆಪಿಸಿಸಿ ಕಚೇರಿ ಸುದ್ದಿಗಾರರ ಜೊತೆ ಮಾತನಾಡಿ, ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪ್ರದರ್ಶನ ಕಳಪೆಯಾಗಿದೆ. ಸ್ಥಾನವನ್ನು ಗೆದ್ದಿಲ್ಲ, ಜೊತೆಗೆ ಮಾತುಗಳೂ ಕೂಡ ಕಡಿಮೆ ಬಂದಿವೆ. ನಮ್ಮ ಪ್ರದರ್ಶನ ಅತ್ಯಂತ ಕಳಪೆಯಾಗಿದ್ದು, ರಾಷ್ಟ್ರೀಯ ನಾಯಕರು ಪಕ್ಷ ಸಂಘಟನೆ ವಿಚಾರದಲ್ಲಿ ಗಮನ ಹರಿಸಲಿದ್ದಾರೆ ಎಂದರು.
ರಾಜ್ಯ ನಾಯಕರು ಸ್ವಪ್ರತಿಷ್ಠೆ ಬಿಡಬೇಕು. ಎಲ್ಲರೂ ಒಟ್ಟಾಗಿ ಪಕ್ಷ ಸಂಘಟಿಸಬೇಕು. ನಾವು ಹೆಚ್ಚಿನ ಒತ್ತನ್ನು ಪಕ್ಷ ಸಂಘಟನೆಗೆ ನೀಡ್ತೇವೆ ಎಂದು ಪಕ್ಷದೊಳಗಿನ ಅಸಮಾಧಾನದ ಬಗ್ಗೆ ದಿನೇಶ್ ಬೇಸರ ಹೊರಹಾಕಿದರು.
ಕಾಂಗ್ರೆಸ್ ಪಕ್ಷ ಇನ್ನಷ್ಟು ಬಲಿಷ್ಠ ಆಗಬೇಕಿದೆ. ಈ ನಿಟ್ಟಿನಲ್ಲಿ ತಾವು ಕೂಡ ಪಕ್ಷದ ಹಿರಿಯ ನಾಯಕರಿಗೆ ಸಲಹೆ ನೀಡಲಿದ್ದು, ಅಧಿಕಾರಕ್ಕಾಗಿ ಹುದ್ದೆಯಲ್ಲಿರುವ ಪಕ್ಷದ ಮುಖಂಡರ ಬಗ್ಗೆ ಗಮನಹರಿಸಲು ಸೂಚಿಸುತ್ತೇನೆ. ಅತ್ಯಂತ ಗಂಭೀರವಾಗಿ ಪಕ್ಷ ಸಂಘಟನೆ ಗಮನಹರಿಸಬೇಕಿದೆ. ರಾಜ್ಯ ಮುನ್ಸಿಪಲ್ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಸ್ಥಾನ ಬಂದಿದೆ. ನಮಗೆ 69 ಸ್ಥಾನಗಳು ಬಂದಿವೆ. ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಪ್ರಥಮ ಸ್ಥಾನಕ್ಕೆ ಬಂದಿದೆ. ಕಾರ್ಯಕರ್ತರು ಉತ್ತಮ ಕೆಲಸ ಮಾಡಿದ್ದಾರೆ. ಅವರಿಗೆ ಕೃತಜ್ನತೆ ಸಲ್ಲಿಸುತ್ತೇನೆ. ಸಿರಗುಪ್ಪ, ಹುಣಸೂರುಗಳಲ್ಲಿ ಅಧಿಕಾರಕ್ಕೆ ಬರುತ್ತೇವೆ. ಹೊಸಕೋಟೆಯಲ್ಲಿ ಬೇರೆ ಪರಿಸ್ಥಿತಿ ಬಂದಿದೆ. ಹೊಸಕೋಟೆಯಲ್ಲಿ ಬೇರು ಮಟ್ಟದಲ್ಲಿ ಪಕ್ಷ ಬಲವಾಗಿದೆ. ಅಲ್ಲಿ ಕಾರ್ಯಕರ್ತರಿಗೆ ಮತ್ತಷ್ಟು ಉತ್ಸಾಹ ತುಂಬಬೇಕಿದೆ. ಆಡಳಿತ ಪಕ್ಷದ ಪರವಾಗಿ ಬರಬೇಕಿತ್ತು. ಆದರೆ ಹಾಗೆ ಆಗಿಲ್ಲ, ಪಕ್ಷಕ್ಕೆ ಮುನ್ನಡೆ ಸಿಕ್ಕಿದೆ ಎಂದರು.
'ದೆಹಲಿ ಫಲಿತಾಂಶ ಎಚ್ಚರಿಕೆಯ ಗಂಟೆ'
ದೆಹಲಿ ವಿಧಾನಸಭೆ ಫಲಿತಾಂಶ ವಿಚಾರ ಮಾತನಾಡಿ, ನಮಗೆ ಹಿನ್ನೆಡೆಯಾಗಿರುವುದು ನಿಜ. ಆದರೆ ಸರ್ವಾಧಿಕಾರಿ ಧೋರಣೆಗೆ ಪೆಟ್ಟು ಬಿದ್ದಿದೆ. ಆಪ್ಗೆ ಜನ ಮತ ಕೊಟ್ಟು ಗೆಲ್ಲಿಸಿದ್ದಾರೆ. ಕೇಜ್ರಿವಾಲ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸೋಲನ್ನ ಒಪ್ಪಿಕೊಳ್ಳಬೇಕಾದ ಕೆಲಸ ನಾವು ಮಾಡ್ಬೇಕು. ನಮ್ಮ ನಾಯಕರು ಇದರತ್ತ ಗಮನಹರಿಸಬೇಕಿದೆ. ಇದು ಒಂದು ಕಡೆ ನಮಗೆ ಎಚ್ಚರಿಕೆಯ ಗಂಟೆ. ಇದನ್ನ ವರಿಷ್ಠರು ಗಮನಹರಿಸಬೇಕು. ಪಕ್ಷಕ್ಕೆ ಚೈತನ್ಯ ತುಂಬುವ ಕೆಲಸ ಆಗಬೇಕು. ಅಧಿಕಾರಕ್ಕಾಗಿ ಪಕ್ಷದಲ್ಲಿರುವವರನ್ನ ಕೈಬಿಡಬೇಕು. ಪಕ್ಷ ಸಂಘಟಿಸುವವರಿಗೆ ಅವಕಾಶ ನೀಡಬೇಕು ಎಂದು ಹೇಳಿದರು.
ಅದೊಂದು ಸಣ್ಣ ಅಪಘಾತ...
ನಲಪಾಡ್ ಆಕ್ಸಿಡೆಂಟ್ ಮಾಡಿದ ಆರೋಪ ಕುರಿತು ಮಾತನಾಡಿ, ಯಾರೇ ಆಗಲಿ ತಪ್ಪು ತಪ್ಪೇ. ಶಾಸಕರ ಮಗನೇ ಆದ್ರೂ ಕಾನೂನು ರೀತಿ ಕ್ರಮತೆಗೆದುಕೊಳ್ಳಲಿ. ಬಟ್ ಅದೊಂದು ಸಣ್ಣ ಅಪಘಾತವಷ್ಟೇ. ಅದನ್ನೇ ದೊಡ್ಡದು ಮಾಡುವುದು ಸರಿಯಲ್ಲ ಎಂದ ಅವರು ಈ ವಿಚಾರವನ್ನು ಪೊಲೀಸರು ನೋಡಿಕೊಳ್ಳುತ್ತಾರೆ ಎಂದು ಸಾಗಹಾಕುವ ಯತ್ನ ಮಾಡಿದರು.