ಬೆಂಗಳೂರು: ಫೋರ್ಬ್ಸ್ ಪ್ರಕಟಿಸಿದ 30 ವರ್ಷ ವಯಸ್ಸಿನೊಳಗಿನ ಏಷ್ಯಾದ ಸಾಧಕರ ಪಟ್ಟಿಯಲ್ಲಿ ನಗರದ ಸ್ಟಾರ್ಟ್ ಅಪ್ ಪಿಕ್ಸೆಲ್ ಸಂಸ್ಥೆಯ ಸಂಸ್ಥಾಪಕರುಗಳಾದ ಅವೈಸ್ ಮತ್ತು ಕ್ಷಿತಿಜ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿರುವ ಪಿಕ್ಸೆಲ್, 30 ವರ್ಷದೊಳಗಿನವರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಿಷಯವನ್ನು ತಿಳಿಸಲು ಹೆಮ್ಮೆಯಾಗುತ್ತದೆ ಎಂದಿದೆ.
ಭೂಮಿಯ ಚಿತ್ರ ತೆಗೆಯುವ ಉಪಗ್ರಹಗಳ ನಿರ್ಮಿಸಲು ಮತ್ತು ನಿರ್ವಹಿಸಲು ಅಹ್ಮದ್ ಮತ್ತು ಖಂಡೇಲ್ವಾಲ್ 2019ರಲ್ಲಿ ಪಿಕ್ಸೆಲ್ ಸಂಸ್ಥೆ ಪ್ರಾರಂಭಿಸಿದ್ದರು. ಬೆಂಗಳೂರು ಮೂಲದ ಪಿಕ್ಸೆಲ್ ಸಂಸ್ಥೆ ಕಾಡಿನ ಬೆಂಕಿ ಮತ್ತು ತೈಲ ಸೋರಿಕೆಯನ್ನು ಪತ್ತೆ ಹಚ್ಚಲು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತದೆ. ಜಾಗತಿಕ ಪರಿಸರ ಸಮಸ್ಯೆಗಳಾದ ಹವಾಮಾನ ಬದಲಾವಣೆ ಮತ್ತು ವಾಯು ಮಾಲಿನ್ಯವನ್ನು ಗುರುತಿಸಲು ಸಹ ಸಂಸ್ಥೆ ಕೆಲಸ ಮಾಡುತ್ತಿದೆ.
ಪಿಕ್ಸೆಲ್ ಉಪಗ್ರಹವನ್ನು ಭೂಮಿಯ ಕಕ್ಷೆಗೆ ಉಡಾಯಿಸಿದ ಮೊದಲ ಖಾಸಗಿ ಭಾರತೀಯ ಸಂಸ್ಥೆಯಾಗಲು ಸಜ್ಜಾಗಿದೆ. ಡಿಸೆಂಬರ್‌ನಲ್ಲಿ ತನ್ನ ಎರಡನೇ ಉಪಗ್ರಹವನ್ನು ಮತ್ತು 2023ರ ವೇಳೆಗೆ ಇನ್ನೂ 30 ಉಪಗ್ರಹ ಉಡಾಯಿಸಲು ಯೋಜನೆ ರೂಪಿಸಿದೆ.
ಸ್ಟಾರ್ಟ್‌ಅಪ್ ಹೂಡಿಕೆದಾರರಿಂದ 77.7 ಮಿಲಿಯನ್ ಹಣವನ್ನು ಸಂಗ್ರಹಿಸಿದ್ದು, ಭಾರತೀಯ ಹೂಡಿಕೆ ಸಂಸ್ಥೆಗಳಾದ ಬ್ಲೂಮ್ ವೆಂಚರ್ಸ್ ಮತ್ತು ಲೈಟ್‌ಸ್ಪೀಡ್ ಇಂಡಿಯಾ ಪಾರ್ಟ್‌ನರ್ಸ್ ಕೂಡ ಸೇರಿವೆ.
ಓದಿ: 30 ವರ್ಷದೊಳಗಿನ ಏಷಿಯಾದ ಪ್ರತಿಷ್ಠಿತ ಫೋಬ್ಸ್ ಪಟ್ಟಿ ಪ್ರಕಟ : ಸ್ಥಾನ ಗಿಟ್ಟಿಸಿದ ರಾಜಧಾನಿಯ ಯುವತಿ ವಿಭಾ ಹರೀಶ್..