ಬೆಂಗಳೂರು : ಒಬ್ಬ ವಿದ್ಯಾರ್ಥಿಗೂ ಕೊರೊನಾ ಸೋಂಕು ತಗುಲದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಎಚ್ಚರಿಕೆಯಿಂದ ನಡೆಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಇಡೀ ದೇಶವೇ ಎದುರು ನೋಡುತ್ತಿದೆ. ಹೀಗಾಗಿ ಇದನ್ನು ಸವಾಲಾಗಿ ಸ್ವೀಕರಿಸಿ ಜಾಗರೂಕತೆಯಿಂದ ಪರೀಕ್ಷೆಯನ್ನು ನಡೆಸಬೇಕು. ಯಾವುದೇ ಗೊಂದಲಗಳಿಗೆ ಅವಕಾಶಗಳಿಲ್ಲದಂತೆ ಸರ್ಕಾರ ನೀಡಿರುವ ಸೂಚನೆಗಳನ್ನು ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಅವರು ತಿಳಿಸಿದರು.
ಕುಟುಂಬ ಸದಸ್ಯರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸ್ವಯಂ ಗೃಹಬಂಧನದಲ್ಲಿರುವ ಸಚಿವ ಸುಧಾಕರ್, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೈಗೊಂಡಿರುವ ಸಿದ್ಧತೆ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಮ್ಮ ನಿವಾಸದಿಂದಲೇ ವಿಡಿಯೋ ಸಂವಾದ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದೇ ವೇಳೆ ಕೆಲ ಅಗತ್ಯ ಸೂಚನೆಗಳನ್ನು ನೀಡಿದರು. ಮನೆಯಿಂದ ಬರುವ ಪ್ರತಿಯೊಬ್ಬ ವಿದ್ಯಾರ್ಥಿ ಪರೀಕ್ಷೆ ಬರೆದು ಮನೆಗೆ ಹಿಂತಿರುಗುವತನಕ ಕ್ಷೇಮವಾಗಿ ನೋಡಿಕೊಳ್ಳುವಂತೆ ಎಲ್ಲ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕ ಸಾರಿಗೆ ಲಭ್ಯವಿಲ್ಲದ ಕಡೆ ಮಕ್ಕಳನ್ನು ಕರೆತರುವ ವಾಹನ, ಪರೀಕ್ಷಾ ಕೇಂದ್ರಗಳ ಬಳಿ, ಪರೀಕ್ಷಾ ಕೊಠಡಿ, ಶೌಚಾಲಯ ಇತ್ಯಾದಿ ಸ್ಥಳಗಳನ್ನು ಸ್ಯಾನಿಟೈಸಿಂಗ್ ಮಾಡಬೇಕು.
ಪ್ರತಿ ಮಗುವಿಗೂ ಬಿಸ್ಕತ್ ಪ್ಯಾಕೆಟ್ ನೀಡಿ :
ಪ್ರತಿ ವಿದ್ಯಾರ್ಥಿಗೆ ಮಾಸ್ಕ್ ನೀಡಿ ಪರೀಕ್ಷೆ ಬರೆಯುವ ಕೊಠಡಿಯಲ್ಲಿ ಅಂತರ ಇರುವಂತೆ ನೋಡಿಕೊಳ್ಳಬೇಕು. ಇನ್ನು ಬೆಳಗ್ಗೆ 7.30 ಕ್ಕೆ ಬರುವುದರಿಂದ ಪರೀಕ್ಷೆ ಬರೆದು ಹಿಂತಿರುಗುವತನಕ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಲು ಪ್ರತಿ ಮಗುವಿಗೂ ಚಿಕ್ಕ ಬಿಸ್ಕತ್ ಪ್ಯಾಕ್ ನೀಡಬೇಕು. ಇದಕ್ಕಾಗಿ ಜಿಲ್ಲಾಡಳಿತದಿಂದ ಹಣ ಭರಿಸುವಂತೆ ಸೂಚಿಸಿದರು.
ಪ್ರತಿ ವಿದ್ಯಾರ್ಥಿಯನ್ನೂ ಥಮ೯ಲ್ ಸ್ಕ್ಯಾನಿಂಗ್ ಮೂಲಕ ಪರೀಕ್ಷೆ ನಡೆಸಿ ಒಳಬಿಡಬೇಕು. ಒಂದು ವೇಳೆ ಜ್ವರ ಸಹಿತ ಇತರೆ ಸೋಂಕುಗಳಿದ್ದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲು ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದರು. ಕ್ವಾರಂಟೈನ್ ಪ್ರದೇಶಗಳ ಮಕ್ಕಳಿಗೆ ಪ್ರತ್ಯೇಕ ಕೇಂದ್ರಗಳನ್ನು ಮೀಸಲಿಟ್ಟು ಒಂದು ವೇಳೆ ಅವರು ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದಲ್ಲಿ ಆಗಸ್ಟ್‌ನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದರು.
ಪೋಷಕರಿಗೆ ಆತಂಕಗಳಿಲ್ಲದಂತೆ ಜಿಲ್ಲಾಡಳಿತಗಳು ಮಾಧ್ಯಮಗಳ ಮೂಲಕ ಸರ್ಕಾರ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಬೇಕು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 458 ಕ್ವಾರಂಟೈನ್ ಪ್ರದೇಶಗಳಿವೆ. ಅಲ್ಲಿ ಪರೀಕ್ಷೆ ಬರೆಯುವ ಮಕ್ಕಳ ಬಗ್ಗೆ ಗರಿಷ್ಠ ಪ್ರಮಾಣದ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಆ ಮಕ್ಕಳಲ್ಲಿ ಯಾರಿಗಾದರೂ ಸೋಂಕಿನ ಸೂಚನೆ ಕಂಡು ಬಂದಲ್ಲಿ ತಕ್ಷಣವೇ ಪರೀಕ್ಷಾ ಕೇಂದ್ರದ ಬಳಿಯಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಹತ್ತಿರದ ಕೋವಿಡ್ ಕೇರ್ ಸೆಂಟರ್‌ಗಳಿಗೆ ಕರೆದೊಯ್ದು ಪರೀಕ್ಷೆ ನಡೆಸಬೇಕು. ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.