ಯಲಹಂಕ :ವರಿಷ್ಠರು ತೀರ್ಮಾನ ಮಾಡಿದರೆ, ಪ್ರಾಮಾಣಿಕವಾಗಿ ಕೆಲಸ ಮಾಡುವೆ. ಸಚಿವ ಸ್ಥಾನಕ್ಕಾಗಿ ಲಾಭಿ ಮಾಡುವುದಿಲ್ಲ, ಪಕ್ಷಕ್ಕೆ ಮುಜುಗರ ತರುವಂತಹ ಯಾವುದೇ ಕೆಲಸಕ್ಕೆ ಮುಂದಾಗುವುದಿಲ್ಲ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಿಹಿ ಸುದ್ದಿ ನೀಡಲಿದ್ದಾರೆ ಎಂದು ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದರು.
ಚಲ್ಲಹಳ್ಳಿ ಗ್ರಾಮದಲ್ಲಿ ಜಿಕೆವಿಕೆ ವಿದ್ಯಾರ್ಥಿಗಳ ಕ್ಷೇತ್ರಾಧ್ಯಯನ ಕಾರ್ಯಕ್ರಮದ ಅಂಗವಾಗಿ ಕೃಷಿ ಸೊಗಡು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದರು.
ಉಪಚುನಾವಣೆಯಲ್ಲಿ ಸೋತವರಿಗೂ ಸಚಿವ ಸ್ಥಾನ ಕೊಡಬೇಕೆನ್ನುವ ಬಗ್ಗೆ ಒತ್ತಡ ಹೆಚ್ಚಾಗುತ್ತಿರುವುದರ ಕುರಿತು ಪ್ರತಿಕ್ರಿಯಿಸಿ, ರಾಜಕಾರಣ ನಿಂತ ನೀರಲ್ಲ, ಸದಾ ಹರಿಯುತ್ತಲೇ ಇರುತ್ತದೆ. ಸಚಿವ ಸ್ಥಾನ ಯಾರೇ ಕೇಳಿದ್ರು, ಅಂತಿಮ ಆಯ್ಕೆ ಯಡಿಯೂರಪ್ಪನವರದ್ದು ಎಂದು ತಿಳಿಸಿದರು.
ಕೇಂದ್ರ ವರಿಷ್ಠರ ಜೊತೆ ಚರ್ಚಿಸಿ ನಾಳೆ ಅಥವಾ ನಾಡಿದ್ದು ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಶಾಸಕರಾದ ಮೇಲೆ ಸಚಿವರಾಗಿ ಜನರ ಸೇವೆ ಮಾಡಬೇಕೆನ್ನುವ ಆಸೆ ಇದ್ದೇ ಇರುತ್ತದೆ. ಹಾಗಂತ ಎಲ್ಲರು ಸಚಿವರಾಗಲು ಸಾಧ್ಯವೇ ಎಂದು ಪ್ರಶ್ಲಿಸಿದರು. ಬೇರೆ ಬೇರೆ ಕಾರಣಗಳಿಂದ ಸಚಿವ ಸಂಪುಟ ತಡವಾಗಿದೆಯಷ್ಟೇ, ಶೀಘ್ರದಲ್ಲೇ ಸಚಿವ ಸಚಿವ ಸಂಪುಟ ರಚನೆಯಾಗಲಿದೆ ಎಂದರು.
ಅಮಿತ್ ಶಾ ಪಕ್ಷದ ಸಂಘಟನೆಯಲ್ಲಿ ದುಡಿದವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ತೀರ್ಮಾನ ಮಾಡಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್, ನಾನು ಸಹ 45 ವರ್ಷಗಳಿಂದ ಪಕ್ಷದ ಸಂಘಟನೆ ಮಾಡಿಕೊಂಡು ಬಂದಿದ್ದೇನೆ. ನಾನು ಪಕ್ಷದ ಶಿಸ್ತುಬದ್ಧ ಕಾರ್ಯಕರ್ತ, ಪಕ್ಷ ಏನೇ ಜವಾಬ್ದಾರಿ ಕೊಟ್ಟರೂ ಅದನ್ನು ನಿರ್ವಹಿಸುತ್ತೇನೆಂದರು.
ಸಚಿವ ಸ್ಥಾನಕ್ಕಾಗಿ ಲಾಭಿ ಮಾಡುವುದಿಲ್ಲ, ಪಕ್ಷಕ್ಕೆ ಮುಜುಗರವಾಗುವಂತಹ ಕೆಲಸ ಮಾಡುವುದಿಲ್ಲವೆಂದರು. ವರಿಷ್ಠರು ತೀರ್ಮಾನ ಮಾಡಿ, ಸಚಿವ ಸ್ಥಾನ ನೀಡಿದರೆ ಪ್ರಾಮಾಣಿಕ ಕೆಲಸ ಮಾಡುವೆ. ಕೊಡಲಿಲ್ಲವೆಂದಾದರೆ ಸರ್ಕಾರದ ಜೊತೆ ಸೇರಿ ಜನ ಸೇವೆ ಮಾಡುತ್ತೇನೆಂದರು.