ಬೆಂಗಳೂರು: ಹಿರಿಯ ರಾಜಕೀಯ ಮುತ್ಸದ್ದಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಆರ್ ಬೊಮ್ಮಾಯಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಜೂ.6 ರಂದು ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ನಮ್ಮ ತಂದೆ ದಿವಂಗತ ಎಸ್. ಆರ್. ಬೊಮ್ಮಾಯಿಯವರ 99 ಜನ್ಮ ದಿನಾಚರಣೆಯನ್ನು ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಎಜ್ಯುಕೇಶನ್ ಮತ್ತು ವೆಲ್ ಫೇರ್ ಫೌಂಡೇಶನ್ ವತಿಯಿಂದ ಜೂ.6 ರಂದು ಸಂಜೆ 5 ಗಂಟೆಗೆ ಗಾಂಧಿ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುತ್ತೂರು ವೀರ ಸಿಂಹಾಸನ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿಕೊಳ್ಳಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್. ಯಡಿಯೂರಪ್ಪ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ದಿ.ಎಸ್. ಆರ್. ಬೊಮ್ಮಾಯಿಯವರ ಕುರಿತು 'ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್'ನವರು ಹೊರ ತಂದಿರುವ 'ಕಾಫಿ ಟೇಬಲ್' ಪುಸ್ತಕವನ್ನು ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರು ಪದ್ಮವಿಭೂಷಣ ಎಸ್. ಎಂ ಕೃಷ್ಣ ಅವರು ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದ ಆಧ್ಯಕ್ಷತೆಯನ್ನು ಮಾಜಿ ಸಚಿವ ಆರ್.ವಿ. ದೇಶಪಾಂಡೆ ವಹಿಸಿಕೊಳ್ಳಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ.ಸಿ. ಸೋಮಶೇಖರ್ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಕರ್ನಾಟಕ ವಿಧಾನ ಪರಿಷತ್, ಮಾಜಿ ಸಭಾಪತಿ ಬಿ.ಎಲ್. ಶಂಕರ್ ಅವರು ಕೃತಿ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದ ಆರಂಭಕ್ಕೂ ಮುನ್ನ ಹಿನ್ನೆಲೆ ಗಾಯಕಿ ನಾಗಚಂದ್ರಿಕಾ ಭಟ್ ಅವರ ಗಾಯನ ಕಾರ್ಯಕ್ರಮ ಇದೆ ಎಂದು ತಿಳಿಸಿದ್ದಾರೆ.
ದೇಶದ ರಾಜಕಾರಣಕ್ಕೆ ಮಾದರಿಯಾದ ಎಸ್.ಆರ್. ಬೊಮ್ಮಾಯಿ ಪ್ರಕರಣ: ದೇಶದ ರಾಜಕೀಯ ಇತಿಹಾಸದಲ್ಲಿ "ಎಸ್.ಆರ್. ಬೊಮ್ಮಾಯಿ ಪ್ರಕರಣ" ಎಂದೇ ಆಗಾಗ ಪ್ರಸ್ತಾಪವಾಗುತ್ತಲೇ ಇರುತ್ತದೆ. ಈ ಪ್ರಕರಣ ಕಳೆದ ಮೂರು ದಶಕಗಳಿಂದಲೂ ಇಂದಿಗೂ ಸಹ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ.
ಏನಿದು ಎಸ್.ಆರ್. ಬೊಮ್ಮಾಯಿ ಪ್ರಕರಣ?: ಎಸ್.ಆರ್. ಬೊಮ್ಮಾಯಿ ಅವರು ಆಗಸ್ಟ್ 13, 1988 ಮತ್ತು ಏಪ್ರಿಲ್ 1989ರ ನಡುವೆ ಕರ್ನಾಟಕದಲ್ಲಿ ಜನತಾದಳ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು. ಏಪ್ರಿಲ್ ತಿಂಗಳಲ್ಲಿ ಕೆಲವು ಶಾಸಕರು ರಾಜ್ಯಪಾಲರನ್ನು ಭೇಟಿಯಾಗಿ ತಾವು ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆದ ಪತ್ರ ನೀಡಿದ್ದರು. ಸರ್ಕಾರದಲ್ಲಿ ಬಿಕ್ಕಟ್ಟು ಸೃಷ್ಟಿಯಾದಾಗ ಏಪ್ರಿಲ್ 20ರಂದು ಮುಖ್ಯಮಂತ್ರಿಯಾಗಿದ್ದ ಎಸ್.ಆರ್ ಬೊಮ್ಮಾಯಿ ಅವರು ರಾಜ್ಯಪಾಲರನ್ನು ಭೇಟಿಯಾಗಿ ವಿಶ್ವಾಸ ಮತಯಾಚನೆಗೆ ಒಂದು ವಾರದ ಗಡುವು ಕೇಳಿದ್ದರು.
ಆದರೆ, ಅನಿರೀಕ್ಷಿತ ಬೆಳವಣಿಗೆಯಲ್ಲಿ ಮರುದಿನ ರಾಜ್ಯಪಾಲರು ವಿಧಾನಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಆಡಳಿತಕ್ಕೆ ಸೂಚಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದರು. ಅಂದು ರಾಜೀವ್ ಗಾಂಧಿ ಪ್ರಧಾನಿಯಾಗಿದ್ದರು. ಆರ್. ವೆಂಕಟರಾಮನ್ ರಾಷ್ಟ್ರಪತಿಯಾಗಿದ್ದರು. ಆ ಸಂದರ್ಭದಲ್ಲಿ ನಡೆದ ಬೆಳವಣಿಗೆಯಲ್ಲಿ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರು ಕರ್ನಾಟಕದ ಎಸ್ .ಆರ್. ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ವಿಸರ್ಜಿಸಿ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಸಹಿ ಹಾಕಿದ್ದರು.
ಹೈಕೋರ್ಟ್ ಮೆಟ್ಟಿಲೇರಿದ್ದ ಎಸ್ ಆರ್ ಬೊಮ್ಮಾಯಿ: ಈ ನಡೆಯನ್ನು ಪ್ರಶ್ನಿಸಿ ಎಸ್.ಆರ್. ಬೊಮ್ಮಾಯಿ ಅವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ತ್ವರಿತ ವಿಚಾರಣೆ ನಡೆಸಿದ್ದ ಹೈಕೋರ್ಟ್, ರಾಷ್ಟ್ರಪತಿ ಆಡಳಿತ ಹೇರಿರುವ ಪ್ರಕ್ರಿಯೆ ಸಂವಿಧಾನ ಪ್ರಕಾರವೇ ನಡೆದಿದೆ ಎಂದು ತೀರ್ಪು ನೀಡಿತ್ತು. ಎಸ್. ಆರ್. ಬೊಮ್ಮಾಯಿ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆಯ ನಂತರ ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ 1994ರಲ್ಲಿ ಮಹತ್ವದ ತೀರ್ಪು ಪ್ರಕಟಿಸಿತ್ತು.
ಸುಪ್ರೀಂನಿಂದ ಮಹತ್ವದ ಆದೇಶ: ಸರ್ಕಾರವೊಂದಕ್ಕೆ ಬಹುಮತ ಇದೆಯೇ, ಇಲ್ಲವೇ ಎಂದು ನಿರ್ಧರಿಸುವ ವೇದಿಕೆ ವಿಧಾನಸಭೆಯ ಅಧಿವೇಶನವೇ ಹೊರತು ರಾಜಭವನವಲ್ಲ. ಇಷ್ಟೇ ಅಲ್ಲದೆ ಆರ್ಟಿಕಲ್ 356 ರಾಷ್ಟ್ರಪತಿಯವರಿಗೆ ನೀಡಿರುವುದು ಷರತ್ತು ಬದ್ಧ ಅಧಿಕಾರವನ್ನೇ ಹೊರತು ಪರಮಾಧಿಕಾರವನ್ನಲ್ಲ ಎಂದು ಮಹತ್ವದ ತೀರ್ಪು ನೀಡಿತ್ತು. ಈ ಪ್ರಕರಣದಿಂದಾಗಿ ಕೇಂದ್ರ ಸರ್ಕಾರವು ತನಗೆ ಇಚ್ಛೆ ಬಂದಾಗ ರಾಜ್ಯ ಸರ್ಕಾರವನ್ನು ವಜಾಗೊಳಿಸುವ ನಡೆಗೆ ತಡೆ ನೀಡಿತು.
ಇಂದಿಗೂ ಕೂಡ ಅತಂತ್ರ ವಿಧಾನಸಭೆ, ಸರ್ಕಾರದ ರಚನೆ ಪ್ರಕ್ರಿಯೆ ಕಾರ್ಯಗಳು ಬಂದಾಗ ಬೊಮ್ಮಾಯಿ ಪ್ರಕರಣ ಆಗಾಗ ಮುನ್ನಲೆಗೆ ಬರುತ್ತದೆ. ಈ ಹಿನ್ನಲೆಯಲ್ಲಿ ಇಂದಿಗೂ ಕೂಡ ಬೊಮ್ಮಾಯಿ ಪ್ರಕರಣ ದೇಶದ ಸಾಂವಿಧಾನಿಕ ಚರಿತ್ರೆಯಲ್ಲಿ ಅತಿ ಹೆಚ್ಚು ಉಲ್ಲೇಖಿತವಾಗಿರುವ ಹಾಗೂ ಅಷ್ಟೇ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿರುವ ಪ್ರಕರಣ ಎನ್ನುವ ಖ್ಯಾತಿಯನ್ನು ಪಡೆದಿದೆ. ಇದು ಎಸ್ .ಆರ್. ಬೊಮ್ಮಾಯಿ ಪ್ರಕರಣ ಎಂದೇ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಇದನ್ನೂ ಓದಿ: ದೇಶದ ರಾಜಕಾರಣಕ್ಕೆ ಮಾದರಿಯಾದ S.R. ಬೊಮ್ಮಾಯಿ ಪ್ರಕರಣದ ತೀರ್ಪಿನ ಒಂದು ಮೆಲುಕು